ಬೆಂಗಳೂರು: ಬಡ ಜನರು ಹೆಚ್ಚಾಗಿ ಅವಲಂಬಿಸುವುದೇ ಸರ್ಕಾರಿ ಆಸ್ಪತ್ರೆಗಳನ್ನು. ಆದರೆ ಇಂಥ ಸರ್ಕಾರಿ ಆಸ್ಪತ್ರೆಗಳಲ್ಲಿ ಇದೀಗ ಔಷಧಿಗಳು ಲಭಿಸುತ್ತಿಲ್ಲ. ಹೌದು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 250ಕ್ಕೂ ಹೆಚ್ಚು ಔಷಧಿಗಳು ಔಟ್ ಆಫ್ ಸ್ಟಾಕ್ ಆಗಿವೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿಒಂದಲ್ಲಾ ಎರಡಲ್ಲಾ ಬರೋಬ್ಬರಿ 250 ಔಷಧಗಳ ದಾಸ್ತಾನು ಶೂನ್ಯವಾಗಿದೆ. ಇದರಿಂದಾಗಿ ದುಬಾರಿ ಬೆಲೆ ಕೊಟ್ಟು ಖಾಸಗಿ ಆಸ್ಪತ್ರೆ, ಮೆಡಿಕಲ್ ಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ವಿವಿಧ ಟೆಂಡರ್ಗಳ ಪ್ರಕ್ರಿಯೆ ಮುಗಿದಿದ್ದರೂ ಆದೇಶಪತ್ರ ನೀಡುವುದಕ್ಕೆ ವಿಳಂಬವಾಗುತ್ತಿದೆ. ಇದರಿಂದಾಗಿ ಜೀವರಕ್ಷಕ ಔಷಧಿಗಳು ಪೂರೈಕೆಯಾಗಿಲ್ಲ ಎನ್ನಲಾಗುತ್ತಿದೆ. ಔಷಧ ಪೂರೈಕೆಗೆ ಪ್ರತೀ ವರ್ಷ ಕೋಟ್ಯಾಂತರ ರೂ ಖರ್ಚು ಮಾಡುವ ಕೆಎಸ್ಎಂಸಿಎಲ್, ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಗ್ಲೂಕೋಸ್ ಬಾಟಲ್, ಬಯೋಟಿಕ್ ಮಾತ್ರೆ ಸೇರಿದಂತೆ ವಿವಿಧ ವೈದ್ಯಕೀಯ ಸಲಕರಣೆಗಳನ್ನು ಖರೀದಿಸುವುದು. ಆದರೆ ಬೇರೆ ರಾಜ್ಯಕ್ಕೆ ಹೋಲಿಸಿದರೆ ಟೆಂಡರ್ ಪ್ರಕ್ರಿಯೆಯಲ್ಲಿ ಕೆಎಸ್ಎಂಸಿಎಲ್ ಭಾರೀ ಹಿಂದಿ ಉಳಿದಿದೆ. ಇದು ಸಾಮಾನ್ಯ ವರ್ಗದ ರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ. ಶ್ವಾಸಕೋಶ, ಕರುಳು, ರಕ್ತಹೀನತೆ, ನ್ಯಮೋನಿಯಾ, ಅಸ್ತಮಾ, ಮಧುಮೇಹ, ರಕ್ತದೊತ್ತಡ, ಹೃದಯಾಘಾತ, ಕಣ್ಣಿನ ಸೋಂಕು ಸೇರಿದಂತೆ ಹಲವು ಗಂಭೀರ ಖಾಯಿಲೆಗಳಿಗೆ ಔಷಧಗಳ ಅಭಾವವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಯಾರಸಿಟಮಲ್, ಅಲ್ಬುಮಿನಿ, ಆ್ಯಂಪ್ಸಿಲಿನ್, ಲೆವೊಥ್ರಕ್ಸಿನ್, ವಿಲ್ಡಗ್ಲೀಪ್ಟನ್, ಪ್ಯಾರಸಿಟಾ, ನ್ಯುಸ್ಟೊಜಿಮೈನ್, ಸಬ್ಲೋಟೊಮಲ್, ಅಸ್ಟೊಪೈನ್ ಸೇರಿದಂತೆ ವಿವಿಧ ಮಾತ್ರೆಗಳ ಕೊರತೆ ಉಂಟಾಗಿದ್ದು, ಹೀಗಾಗದರೆ ಸರ್ಕಾರಿ ಆಸ್ಪತ್ರೆಗೆ ಹೋಗೋದು ದಂಡ ಅಂತಿದ್ಧಾರೆ ಜನ..