ಭಾರತ -ಮಲೇಷ್ಯಾ ನಡುವೆ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸಲು ಇತ್ತೀಚೆಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಆ ದೇಶದ ಉನ್ನತ ನಾಯಕರ ಜೊತೆಗೆ ಈಚೆಗೆ ನಡೆಸಿದ ಚರ್ಚೆ ನೆರವಾಗಿದೆ’ ಎಂದು ವಿದೇಶಾಂಗ ಸಚಿವಾಲಯ 0ಹೇಳಿದೆ.
ಜೈಶಂಕರ್ ಅವರು ಸಿಂಗಪುರ, ಫಿಲಿಪ್ಪೀನ್ಸ್, ಮಲೇಷ್ಯಾಗೆ ಇತ್ತೀಚೆಗೆ ಪ್ರವಾಸ ಕೈಗೊಂಡಿದ್ದರು. ಮಾರ್ಚ್ 27ರಿಂದ ಎರಡು ದಿನ ಕ್ವಾಲಾಲಂಪುರಕ್ಕೆ ಭೇಟಿ ನೀಡಿದ್ದರು. ಮಲೇಷ್ಯಾ ಪ್ರಧಾನಿ ಅನ್ವರ್ ಬಿನ್ ಇಬ್ರಾಹಿಂ, ಇತರ ನಾಯಕರೊಂದಿಗೆ ಚರ್ಚಿಸಿದ್ದರು.
ವಿದೇಶಾಂಗ ಸಚಿವಾಲಯ ಈ ಸಂಬಂಧ ಹೇಳಿಕೆ ನೀಡಿದೆ. ‘ಭಾರತದ ಐಐಟಿ ಶಾಖೆಯನ್ನು ಮಲೇಷ್ಯಾದಲ್ಲಿ ಆರಂಭಿಸಲು ಅಗತ್ಯ ಸಹಕಾರ ನೀಡುವ ಭರವಸೆಯನ್ನು ಭೇಟಿಯ ಸಂದರ್ಭದಲ್ಲಿ ಅನ್ವರ್ ಅವರು ನೀಡಿದ್ದಾರೆ’ ಎಂದು ಉಲ್ಲೇಖಿಸಿದೆ.
‘ಮಲೇಷ್ಯಾದಲ್ಲಿ ಅಕ್ಕಿ ಕೊರತೆಯಿದ್ದಾಗ ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಆಮದಿಗೆ ಪ್ರಧಾನಿ ನರೇಂದ್ರ ಮೋದಿ ಸಹಕರಿಸಿದ್ದರು. ಜನರ ಅನುಕೂಲಕ್ಕಾಗಿ ಉಭಯ ದೇಶಗಳ ಬಾಂಧವ್ಯ ಇನ್ನಷ್ಟು ದೃಢವಾಗಲಿ’ ಎಂದು ಮಲೇಷ್ಯಾ ಪ್ರಧಾನಿ ತಿಳಿಸಿದ್ದಾರೆ.