ಚಾಮರಾಜನಗರ:- ಬಂಡೀಪುರದಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಅರಣ್ಯ ಇಲಾಖೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಹಸಿರು ಸುಂಕ ವಸೂಲಿಗೆ ಫಾಸ್ಟ್ ಟ್ಯಾಗ್ ಐಡಿಯಾ ಉಪಯೋಗಿಸುತ್ತಿದೆ. ಟ್ರಾಫಿಕ್ ಕಿರಿಕಿರಿಗೆ ಇತಿಶ್ರೀ ಹಾಡಲು ಪ್ರಯೋಗಿಕವಾಗಿ ಫಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಗೆ ತಂದಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಿಂದ ಕೇರಳ ಮತ್ತು ಊಟಿ ಸೇರಿದಂತೆ ತಮಿಳುನಾಡಿಗೆ ತೆರಳುವ ವೇಳೆ ಎದುರಾಗುತ್ತಿದ್ದ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ಗೆ ಮುಕ್ತಿ ಸಿಗುತ್ತಿದ್ದು, ನಗದು ಬದಲಾಗಿ ಫಾಸ್ಟ್ ಟ್ಯಾಗ್ ಆರಂಭಿಸಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿಗರಿಂದ ಹಸಿರು ಸುಂಕ ವಸೂಲಿಗೆ ನಿರ್ಮಾಣವಾಗಿರುವ ಫಾಸ್ಟ್ ಟ್ಯಾಗ್ ಕೇಂದ್ರಕ್ಕೆ ಶೀಘ್ರದಲ್ಲೇ ಚಾಲನೆ ಸಿಗಲಿದ್ದು, ಈಗಾಗಲೇ ಪ್ರಾಯೋಗಿಕ ನಿರ್ವಹಣೆ ಆರಂಭವಾಗಿದೆ.
ರಾಷ್ಟ್ರೀಯ ಹೆದ್ದಾರಿ 67 ಮತ್ತು 766ರಲ್ಲಿ ಮೂರು ಫಾಸ್ಟ್ ಟ್ಯಾಗ್ ಕೇಂದ್ರ ತೆರೆಯಲಾಗಿದೆ. ಮೇಲುಕಾಮನಹಳ್ಳಿ, ಕೆಕ್ಕನಹಳ್ಳ ಮತ್ತು ಮದ್ದೂರಿನ ಚೆಕ್ ಪೋಸ್ಟ್ ಬಳಿ ಫಾಸ್ಟ್ ಟ್ಯಾಗ್ ಕೇಂದ್ರ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದು, ಯಾವುದಾದರೂ ಸಮಸ್ಯೆ ಆಗುತ್ತಿದೆಯಾ ಎಂದು ಪರೀಕ್ಷೆ ನಡೆಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಕಸ ನಿರ್ವಹಣೆ, ಅಪಘಾತ ನಿರ್ವಹಣೆ ಸೇರಿ ವಿವಿಧ ಉದ್ದೇಶಗಳಿಗಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗುವ ವಾಹನಗಳಿಂದ ಲಘು ವಾಹನಗಳಿಗೆ 20 ರೂ., ಭಾರಿ ವಾಹನಗಳಿಗೆ 50 ರೂ. ನಂತೆ ಹಸಿರು ಸುಂಕ ವಸೂಲಿ ಮಾಡಲಾಗುತ್ತಿದೆ.
ಇನ್ನೂ ರಜೆ ದಿನ ಹಾಗೂ ವಾರಾಂತ್ಯದಲ್ಲಿ ಊಟಿ ಹಾಗೂ ಕೇರಳದ ಪ್ರವಾಸಿ ತಾಣಗಳಿಗೆ ಹೆಚ್ಚು ಪ್ರವಾಸಿಗರು ಹೋಗಲಿದ್ದು, ಹಸಿರು ಸುಂಕ ವಸೂಲಿ ಮಾಡುವ ವೇಳೆ ವಾಹನಗಳು ಕಿ.ಮೀ ಗಟ್ಟಲೆ ಸಾಲುಗಟ್ಟಿ ನಿಲ್ಲುತ್ತಿದ್ದವು. ಚೆಕ್ ಪೋಸ್ಟ್ ನಲ್ಲಿ ಟಿಕೆಟ್ ಪಡೆದು ಹೊರಡುವಷ್ಟರಲ್ಲಿ ಗಂಟೆಗೂ ಹೆಚ್ಚು ಸಮಯ ಕಳೆದು ಹೋಗುತ್ತಿತ್ತು. ಹೀಗಾಗಿ ಹೊಸ ಐಡಿಯಾ ಜಾರಿಗೆ ತರಲಾಗುತ್ತಿದೆ.