ದೇವನಹಳ್ಳಿ: ಕನ್ನಮಂಗಲ ಗ್ರಾಮ ಪಂಚಾಯ್ತಿ ಹಾಗೂ ಅಧಿಕಾರಿಗಳ ವಿರುದ್ದ ಮಾಧ್ಯಮಗಳಲ್ಲಿ ತೇಜೋವಧೆ ಮಾಡುತ್ತಿರುವ ದೊಡ್ಡಪನಹಳ್ಳಿಯ ಕೆ.ಸೋಮಶೇಖರ್ ಅವರನ್ನು ಕೂಡಲೇ ಗ್ರಾ.ಪಂ. ಸದಸ್ಯ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ಉಳಿದ 25 ಸದಸ್ಯರು, ಪೂಜನಹಳ್ಳಿ ಗ್ರಾಮಸ್ಥರು ಹಾಗೂ ದಲಿತಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಬಲಾಢ್ಯರ ಪರವಾಗಿ ದುರುದ್ದೇಶದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಸೋಮಶೇಖರ್ ವಿರುದ್ದ ತಕ್ಷಣವೇ ಎಫ್ ಐಆರ್ ದಾಖಲಿಸಿ, ಕಾನೂನು ಕ್ರಮ ಜರುಗಿಸುವಂತೆಯೂ ಪ್ರತಿಭಟನಾನಿರತರು ಆಗ್ರಹಿಸಿದರು.
ಪ್ರತಿಭಟನೆಯ ವೇಳೆ ಬಹುತೇಕರು ತಮ್ಮ ಆಧಾರ್ ಕಾರ್ಡ್ ತೋರಿಸಿ, ನಾವೆಲ್ಲರೂ ಪೂಜನಹಳ್ಳಿ ಗ್ರಾಮಸ್ಥರೇ ಹೊರತು ಬಾಡಿಗೆಯವರಲ್ಲ ಎಂದು ಸೋಮಶೇಖರ್ ಅವರಿಗೆ ತಿರುಗೇಟು ನೀಡಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿ(ಭೀಮಶಕ್ತಿ)ಯ ಮುಖಂಡ ಮುರುಳಿ ಮಾತನಾಡಿ, ಪೂಜನಹಳ್ಳಿ ಗ್ರಾಮದ ದೊಡ್ಡಮುನಿಯಪ್ಪನವರ ಮಗನಾದ ಗೋವಿಂದಪ್ಪ ಅವರು 1965 ರಿಂದಲೂ ಅಂಗನವಾಡಿ ನಡೆಸುತ್ತಿದ್ದ ಜಾಗಕ್ಕೆ ಕಂದಾಯ ಕಟ್ಟಿಕೊಂಡು ಬಂದಿದ್ದಾರೆ. ಈ ಸ್ವತ್ತಿನ ವಿಚಾರದಲ್ಲಿ ನ್ಯಾಯಾಲಯ ಕೂಡ ಗೋವಿಂದಪ್ಪ ಪರ ಆದೇಶ ನೀಡಿದೆ. ಇಷ್ಟಾದರೂ ಹಣದಾಸೆಗೆ ಸುಖಾಸುಮ್ಮನೆ ಪಂಚಾಯ್ತಿ ಹಾಗೂ ಅಧಿಕಾರಿಗಳಿಗೆ ಕೆಟ್ಟ ಹೆಸರು ತರಲು ಸೋಮಶೇಖರ್ ಪ್ರಯತ್ನಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಒತ್ತಡಕ್ಕೆ ಮಣಿದು ಯಾವುದೇ ಕ್ರಮ ಜರುಗಿಸಬಾರದು. ಒಂದು ವೇಳೆ ಪಿಡಿಒ ವಿರುದ್ದ ಕ್ರಮ ಕೈಗೊಂಡರೆ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಗೋವಿಂದಪ್ಪ ಅವರು ಅಂಗನವಾಡಿಗಾಗಿ ತಮ್ಮ ಒಟ್ಟು 75*120 ಅಳತೆಯ ನಿವೇಶನದಲ್ಲಿ 22*23 ಜಾಗವನ್ನು ದಾನ ನೀಡಿದ್ದಾರೆ. ಉಳಿದ ಜಾಗಕ್ಕೆ ಖಾತೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಬೇಕಿದ್ದರೆ ಹಿರಿಯ ಅಧಿಕಾರಿಗಳೇ ಸ್ಥಳ, ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿ ಎಂದರು.
ಪಿತ್ರಾರ್ಜಿತ ಸ್ವತ್ತಿಗೆ ಖಾತೆ ಮಾಡಿಕೊಡಬಾರದು ಎಂದು ಹೇಳಿ ಧರಣಿ ನಡೆಸಲು ಸೋಮಶೇಖರ್ ಯಾರು?, ಆತ ದೊಡ್ಡಪನಹಳ್ಳಿ ಸದಸ್ಯ, ಹೀಗಿರುವಾಗ ಪೂಜನಹಳ್ಳಿ ಖಾಸಗಿ ಸ್ವತ್ತಿನ ವಿಚಾರದಲ್ಲಿ ಮೂಗು ತೂರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಸ್ವತ್ತಿನ ಮಾಲೀಕ ಗೋವಿಂದಪ್ಪ ಮಾತನಾಡಿ, ನಿವೇಶನದ ವಿಸ್ತೀರ್ಣದಲ್ಲಿ ಏರುಪೇರು ಬಂದ ಕಾರಣ ತಿದ್ದುಪಡಿ ಮಾಡಿಸಬೇಕಿತ್ತು. ಆಗ ಸೋಮಶೇಖರ್ ಅವರು ಖುದ್ದು ಬಂದು ತಿದ್ದುಪಡಿ ಮಾಡಿಸಿಕೊಡುತ್ತೇನೆ 5 ಲಕ್ಷ ರೂ. ಕೊಡಿ ಎಂದು ಕೇಳಿದರು. ನಾನು ಕೊಡಲು ಒಪ್ಪದಿದ್ದಾಗ ಚಂದ್ರೇಗೌಡ ಅವರದ್ದು ಜಾಗ ಎಂದೇಳಿ ಗಲಾಟೆ ಮಾಡಿದರು. ನಾನು ನ್ಯಾಯಾಲಯದ ಮೊರೆ ಹೋದೆ. ಘನ ನ್ಯಾಯಾಲಯ ನಮ್ಮಂತೆ ಆದೇಶ ನೀಡಿದೆ. ಇಷ್ಟಾದರೂ ದುರುದ್ದೇಶಪೂರ್ವಕವಾಗಿ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಧರಣಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ಸಾಮೂಹಿಕ ರಾಜೀನಾಮೆ ಎಚ್ಚರಿಕೆ..!
ಕನ್ನಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ಗ್ರಾಮಗಳ ಒಟ್ಟು 26 ಸದಸ್ಯರಲ್ಲಿ ಸೋಮಶೇಖರ್ ಅವರು ದೊಡ್ಡಪ್ಪನಹಳ್ಳಿ ಗ್ರಾಮದಿಂದ ಆಯ್ಕೆಯಾಗಿದ್ದಾರೆ. ಅವರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗಿಂತ ವೈಯಕ್ತಿಕ ಪ್ರತಿಷ್ಠೆಯೇ ಹೆಚ್ಚು.
ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಬಗೆಹರಿಸಬಹುದಾದ ಸಣ್ಣಪುಟ್ಟ ಸಮಸ್ಯೆಗಳನ್ನು ಮೇಲಧಿಕಾರಿಗಳು ಹಾಗೂ ಸಾಮಾನ್ಯ ಸಭೆಯ ಗಮನಕ್ಕೆ ತರದೇ ಮಾಧ್ಯಮಗಳ ಮುಂದೆ ಹೋಗಿ ಪಂಚಾಯ್ತಿಗೆ ಕೆಟ್ಟ ಹೆಸರು ತರುತ್ತಿದ್ದಾರೆ.
ಪ್ರತಿ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿ ಬಹುತೇಕರು ತೆಗೆದುಕೊಳ್ಳುವ ಸರ್ವಾನುಮತದ ನಿರ್ಣಯಗಳನ್ನು ಯಾವಾಗಲೂ ವಿರೋಧಿಸುತ್ತಾರೆ. ಗ್ರಾಮ ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಮೂಲಕ ದುರ್ವರ್ತನೆ ತೋರುವ ಸ್ವಭಾವವನ್ನು ಹೊಂದಿದ್ದಾರೆ ಎಂದು ಉಳಿದ 25 ಗ್ರಾಮ ಪಂಚಾಯ್ತಿ ಸದಸ್ಯರು ಆರೋಪಿಸಿದ್ದಾರೆ.
ಸೋಮಶೇಖರ್ ಅವರ ಸುಳ್ಳು ಆರೋಪ, ಒತ್ತಡ ತಂತ್ರದಿಂದ ಕನ್ನಮಂಗಲ ಗ್ರಾಮ ಪಂಚಾಯಿತಿಯ ಪ್ರಾಮಾಣಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತೊಂದರೆಯಾದರೆ ಕನ್ನಮಂಗಲ ಗ್ರಾ.ಪಂ.ಸದಸ್ಯರಾದ ನಾವೆಲ್ಲರೂ ನಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಉಗ್ರ ಹೋರಾಟಕ್ಕೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.