ಹುಬ್ಬಳ್ಳಿ: ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಬೆಳೆ ವಿಮೆ ನೀಡಿಕೆ, ಕಳಸಾ ಬಂಡೂರಿ ಮಹದಾಯಿ ಯೋಜನೆ ಜಾರಿ, ಬರ ಪರಿಹಾರ, ರೈತರ ಬೆಳೆಗೆ ಯೋಗ್ಯ ಬೆಲೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆಯನ್ನು ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆಸಲಾಯಿತು.
ಅಂಬೇಡ್ಕರ್ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ 5 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಕೆಲವು ಬ್ಯಾಂಕ್ಗಳು ಸಾಲ ಪಾವತಿಸುವಂತೆ ರೈತರಿಗೆ ನೋಟಿಸ್ ನೀಡುತ್ತಿವೆ. ಟ್ರ್ಯಾಕ್ಟರ್ಗಳನ್ನು ಜಪ್ತಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರ ಆವರಿಸಿದ್ದು, ಸಾಲ ಪಾವತಿಗೆ ಒತ್ತಡ ಹೇರಬಾರದು ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದ ಕಳಸಾ ಬಂಡೂರಿ ಮಹದಾಯಿ ಯೋಜನೆ ಜಾರಿ ಮಾಡಬೇಕು,
ಕಬ್ಬಿನ ಬೆಲೆಗೆ ಯೋಗ್ಯ ಬೆಲೆ ನೀಡಬೇಕು ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಮಾಡಬೇಕು ಬ್ಯಾಂಕ್ ಅಧಿಕಾರಿಗಳ ಕಿರುಕುಳಕ್ಕೆ ತಕ್ಷಣ ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ವಾಸುದೇವ ಮೇಟಿ ಆಗ್ರಹಿಸಿದರು. ತಹಸ್ದೀಲಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ರೈತ ಮುಖಂಡರಾದ ವೈ.ಎನ್ ಪಾಟೀಲ್, ಮಲ್ಲಿಕಾರ್ಜುನ ಕುನ್ನೂರ, ಕಂಟೆಪ್ಪಗೌಡರ, ರಾಜು ಸಾ ನಾಯಕವಾಡಿ, ಬಸವರಾಜ ಯೊಗಪ್ಪನವರ ಮುಂತಾದವರಿದ್ದರು.