ಹುಬ್ಬಳ್ಳಿ: ರೈಲ್ವೆ ಇಲಾಖೆ ಹಾಗೂ ವಿದ್ಯುತ್ ಖಾಸಗೀಕರಣ ವಿರೋಧಿಸಿ ಸಿಐಟಿಯು ರೈತ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ನಮ್ಮ ಕರ್ನಾಟಕ ಸೇನೆ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಸೋಮವಾರ ರೈಲ್ವೆ ನಿಲ್ದಾಣ ಬಳಿ ನಡೆಸಲಾಯಿತು. ನಗರದ ರೈಲು ನಿಲ್ದಾಣದ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಠಾವೋ, ರೈಲ್ವೆ ಬಚಾವೋ ಎಂಬ ಘೋಷಣೆಗಳನ್ನು ಪ್ರತಿಭಟನೆಕಾರರು ಹಾಕಿದರು.
ಪ್ರತಿಭಟನೆಕಾರರು ನಂತರ ರೈಲು ನಿಲ್ದಾಣದ ವ್ಯವಸ್ಥಾಪಕರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿ, ರೈಲ್ವೆ ಖಾಸಗೀಕರಣ ಮೋದಿ ಸರ್ಕಾರವು ರಾಷ್ಟ್ರೀಯ ನಗದೀಕರಣ ಪೈಪ್ಲೈನ್ನಲ್ಲಿ ರೈಲ್ವೆ ಅತೀ ಮುಖ್ಯ ಗುರಿಯಾಗಿದೆ. ರೈಲು ನಿಲ್ದಾಣಗಳು, ನಿಲ್ದಾಣಗಳ ಸುತ್ತ ಇರುವ ರೈಲ್ವೆ ಭೂಮಿ, ರೈಲ್ವೆ ಹಳಿಗಳು, ರೈಲ್ವೆಗಳ ಸರಕು ದಾಸ್ತಾನು ಶೆಡ್ಡುಗಳು, ರೈಲ್ವೆ ಕಾಲೋನಿಗಳು, ರೈಲ್ವೆ ಆಟದ ಮೈದಾನಗಳನ್ನು ಖಾಸಗೀಯವರಿಗೆ ದೀರ್ಘಾವಧಿಗೆ ಗುತ್ತಿಗೆ ಮೇಲೆ ಕೊಡುವುದು ಆಗಿದೆ. ಭಾರತೀಯ ರೈಲ್ವೆ ನಮ್ಮ ದೇಶದ ಜೀವಾಳ.
ಭಾರತದಲ್ಲಿ 7,300 ರೈಲು ನಿಲ್ದಾಣಗಳು, 13452 ಪ್ರಯಾಣಿಕರ ರೈಲುಗಳು ಇವೆ. 2 ಕೋಟಿ 40 ಲಕ್ಷ ಜನ ಪ್ರತಿನಿತ್ಯ ರೈಲಿನಲ್ಲಿ ಸಂಚರಿಸುತ್ತಾರೆ. 9141 ಗೂಡ್ಸ್ ರೈಲುಗಳು ಪ್ರತಿದಿನ ಸಂಚರಿಸುತ್ತವೆ. ಆಹಾರ ಧಾನ್ಯಗಳು, ಸಾಮಾನ್ಯರು ಬಳಸುವ ಅಗತ್ಯ ವಸ್ತುಗಳು, ಕೃಷಿ ಮತ್ತು ಕೈಗಾರಿಕೆಯ ಉತ್ಪನ್ನಗಳು ಸೇರಿದಂತೆ 1.42 ಶತಕೋಟಿ ಮೆಟ್ರಿಕ್ ಟನ್ನು ಸರಕುಗಳನ್ನು ಪ್ರತಿದಿನ ಸಾಗಣೆ ಮಾಡುತ್ತದೆ ಎಂದು ವಿವರಿಸಿದರು.
1991ರ ನವ ಉದಾರೀಕರಣ ನೀತಿಗಳು ಜಾರಿಗೆ ಬಂದವು. ಅಂದಿನಿಂದ ಬಂದ ಎಲ್ಲ ಸರ್ಕಾರಗಳು ಇದೇ ನೀತಿಯನ್ನು ಅನುಸರಿಸುತ್ತಿವೆ. ಆದಾಗ್ಯೂ, ಮೋದಿ ಸರ್ಕಾರವು ನವ ಉದಾರೀಕರಣ ನೀತಿಯನ್ನು ತೀವ್ರ ರೀತಿಯಲ್ಲಿ ಅನುಸರಿಸುತ್ತಿವೆ. ಖಾಸಗೀಕರಣ ವಿಶ್ವದರ್ಜೆಯ ಅನುಭವ ನೀಡಲಿದೆ. ಜನರಿಗೆ ಅನೇಕ ಅನುಕೂಲಗಳು ದೊರೆಯಲಿವೆ. ಹೆಚ್ಚಿನ ಉದ್ಯೋಗ ಸೃಜನೆ ಆಗಲಿದೆ ಎಂಬ ಹುಸಿ ಭರವಸೆ ನೀಡುತ್ತದೆ ಎಂದು ನಮ್ಮ ಕರ್ನಾಟಕ ಸೇನೆ ಉತ್ತರ ಕರ್ನಾಟಕ ಅಧ್ಯಕ್ಷ ಅಮೃತ ಇಜಾರೆ, ಕಾರ್ಮಿಕ ಸಂಘಟನೆ ಮುಖಂಡ ಮಹೇಶ ಪತ್ತಾರ ಆಕ್ರೋಶ ವ್ಯಕ್ತಪಡಿಸಿ ರೈಲ್ವೆ ಹಾಗೂ ವಿದ್ಯುತ್ ಖಾಸಗೀಕರಣದಿಂದ ಜನರಿಗೆ ದೊಡ್ಡ ಹಾನಿಯಾಗುತ್ತದೆ ಕಾರ್ಪೋರೇಟ್ ಕಂಪನಿಗಳಿಗೆ ರೆಡ್ ಕಾರ್ಪೆಟ್ ಹಾಕಲು ಖಾಸಗಿಕೀರಕಣ ಮಾಡಲಾಗುತ್ತಿದೆ ಎಂದರು.
ಲಕ್ಷಾಂತರ ಅಸಂಘಟಿತ ವಲಯದ ಕಾರ್ಮಿಕರು ರೈಲು ನಿಲ್ದಾಣಗಳ ಸಮೀಪ ಇರುವ ಕೊಳಚೆ ಪ್ರದೇಶಗಳಲ್ಲಿ ನೆಲೆಸಿರುತ್ತಾರೆ. ಅವರಿಗೆಲ್ಲ ಆಶ್ರಯ ಇಲ್ಲದಂತಾಗುತ್ತದೆ. ಬಡ ಆಟೋ ಚಾಲಕರುಗಳಿಗೆ ನಿಲ್ದಾಣದ ಬಳಿ ಪಾರ್ಕಿಂಗ್ ಇರುವುದಿಲ್ಲ. ಇದರಿಂದ ಅವರು ಆದಾಯ ಕಳೆದುಕೊಳ್ಳುವರು. ಸಾಮಾನ್ಯ ಪ್ರಯಾಣಿಕರೂ ಸಹ ರೈಲು ನಿಲ್ದಾಣದ ಬಳಿ ಕಡಿಮೆ ದರಕ್ಕೆ ಆಟೋ ಪಡೆಯುವುದನ್ನು ಕಳೆದುಕೊಳ್ಳುತ್ತಾರೆ. ದೂರದ ಊರುಗಳಿಂದ ಬರುವ ಪ್ರಯಾಣಿಕರು ಪ್ಲಾಟ್ ಫಾರ್ಮ್ನಲ್ಲಿ ಕಾಯುವುದಕ್ಕೆ ಅವಕಾಶ ಇರುವುದಿಲ್ಲ. ಅವರು ಕೇವಲ ವಸತಿ ನಿಲಯಗಳಲ್ಲಿ ಹಣ ಪಾವತಿಸಿ ಕಾಯಬೇಕಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ರೈಲು ಹತ್ತಲು ಮತ್ತು ಇಳಿಯಲು ಮಾತ್ರ ಪ್ರಯಾಣಿಕರಿಗೆ ಅವಕಾಶ ಇರಲಿದೆ. ಖಾಸಗಿಕರಣದಿಂದಾಗಿ ಪ್ಯಾಸೆಂಜರ್ ಪ್ರಯಾಣ ದರ ತೀವ್ರವಾಗಿ ಹೆಚ್ಚಾಗಲಿದೆ. ಪ್ಲಾಟ್ ಫಾರ್ಮ್ ಟಿಕೆಟ್ ದರ ಈಗಾಗಲೇ ಕೆಲವು ನಿಲ್ದಾಣಗಳಲ್ಲಿ 50ರೂ.ಗಳಿಗೆ ಹೆಚ್ಚಿಸಲಾಗಿದೆ. ರೈಲ್ವೆಯ ಒಟ್ಟಾರೆ ಆದಾಯದಲ್ಲಿ ಶೇಕಡಾ 65ರಷ್ಟು ಸರಕು ಸಾಗಣೆಯಿಂದ ಗಳಿಸಲಿದೆ. ರೈಲ್ವೆ ಗೂಡ್ಸ್ ಶೆಡ್ಡುಗಳಲ್ಲಿ ಮೂರು ಲಕ್ಷ ಜನ ಕಾರ್ಮಿಕರಿದ್ದಾರೆ. ಖಾಸಗೀಕರಣದಿಂದಾಗಿ ರೈಲ್ವೆಯು ಅಪಾರ ಹಾನಿಗೀಡಾಗಲಿದೆ ಮತ್ತು ಲಕ್ಷಗಂಟಲೇ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಾಮಾನ್ಯ ಜನ ರೈಲ್ವೆ ಸಿಬ್ಬಂದಿಗೆ ಧ್ವಂಸಕಾರಿಯಾಗಿದೆ. ಅದೇ ರೀತಿ ದೇಶಕ್ಕೂ ಸಹ ವಿನಾಶಕಾರಿಯಾಗಿದೆ. ಆದ್ದರಿಂದ ವಿದ್ಯುತ್ ಮತ್ತು ರೈಲ್ವೆ ಖಾಸಗೀಕರಣವನ್ನು ವಿರೋಧ ವ್ಯಕ್ತಪಡಿಸಲಾಗಿದ್ದು, ಕೂಡಲೇ ಖಾಸಗೀಕರಣ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು. ಕಾರ್ಮಿಕ ಸಂಘಟನೆಗಳ ಮುಖಂಡರು, ವಿವಿಧ ರೈತ, ದಲಿತ, ಕಾರ್ಮಿಕ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರಮುಖರು
ಮುಂತಾದವರು ಪಾಲ್ಗೊಂಡಿದ್ದರು.