ಬೈರೂತ್: ಲೆಬನಾನ್ ಕದನವಿರಾಮ ಒಪ್ಪಂದಕ್ಕೆ ಅನುಗುಣವಾಗಿ 60 ದಿನಗಳ ನಿಗದಿತ ಗಡುವಿನೊಳಗೆ ದಕ್ಷಿಣ ಲೆಬನಾನ್ ನಿಂದ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಇಸ್ರೇಲ್ ವಿಫಲವಾಗಿರುವುದನ್ನು ಖಂಡಿಸಿ ಗಡಿಭಾಗದ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಇಸ್ರೇಲ್ ಪಡೆ ನಿರ್ಮಿಸಿದ್ದ ರಸ್ತೆತಡೆಯನ್ನು ಮುರಿದು ತಮ್ಮ ಮನೆಗೆ ಹಿಂತಿರುಗಲು ನೂರಾರು ಜನರು ಮುಂದಾದಾಗ ಅವರನ್ನು ಇಸ್ರೇಲ್ ಸೇನೆ ತಡೆದಿದೆ. ಈ ಸಂದರ್ಭ ಪ್ರತಿಭಟನಾಕಾರರ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 10 ನಿವಾಸಿಗಳು ಹಾಗೂ ಲೆಬನಾನ್ ಸೈನಿಕ ಮೃತಪಟ್ಟಿದ್ದು 83ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಓರ್ವ ಯೋಧನೂ ಸೇರಿದ್ದಾನೆ ಎಂದು ಲೆಬನಾನ್ ನ ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಿದೆ.
ಇಸ್ರೇಲ್ ಪಡೆಗಳು ದಕ್ಷಿಣ ಲೆಬನಾನ್ ತೊರೆಯುವ ಗಡುವನ್ನು 2025 ರ ಫೆಬ್ರವರಿ 18 ರವರೆಗೆ ವಿಸ್ತರಿಸಲು ಇಸ್ರೇಲ್ ಮತ್ತು ಲೆಬನಾನ್ ಒಪ್ಪಿಕೊಂಡಿವೆ ಎಂದು ಶ್ವೇತಭವನ ಘೋಷಿಸಿತು. ನವೆಂಬರ್ ಅಂತ್ಯದಲ್ಲಿ ಇಸ್ರೇಲ್–ಹಿಜ್ಬುಲ್ಲಾ ಸಂಘರ್ಷವನ್ನು ಕೊನೆಗೊಳಿಸಿದ ಕದನ ವಿರಾಮ ಒಪ್ಪಂದವು ನಿಗದಿಪಡಿಸಿದ ಮೂಲ 60 ದಿನಗಳ ಗಡುವನ್ನು ಮೀರಿ ಇಸ್ರೇಲ್ ಹೆಚ್ಚಿನ ಸಮಯವನ್ನು ಕೋರಿದ್ದು ಆ ಬಳಿಕ ಈ ಘಟನೆ ನಡೆದಿದೆ.
ಹಿಜ್ಬುಲ್ಲಾ ಜತೆಗಿನ ಕದನ ವಿರಾಮ ಒಪ್ಪಂದದ ಪ್ರಕಾರ ದಕ್ಷಿಣ ಲೆಬನಾನ್ ನಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು 30 ದಿನಗಳ ಹೆಚ್ಚುವರಿ ಕಾಲಾವಕಾಶದ ಅಗತ್ಯವಿದೆ ಎಂದು ಇಸ್ರೇಲ್ ಸರಕಾರ ಹೇಳಿದೆ.