ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಂಪರ್ಕಕ್ಕೆ, ಸರ್ಕಾ ರದ ಸಬ್ಸಿಡಿಗಳನ್ನು ಪಡೆಯಲು ಹಾಗೂ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಅತ್ಯಗತ್ಯ. ಒಟ್ಟಾರೆ ಇಂದು ಯಾವುದೇ ಒಂದು ಕೆಲಸಕ್ಕೆ ಹೋದ್ರೂ ಆಧಾರ್ ಕಾರ್ಡ್ ಅಗತ್ಯ. ಇನ್ನು ನೀವು ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ ಮಾಡಬಹುದಾ? ಹಾಗಾದ್ರೆ ಒಬ್ಬ ವ್ಯಕ್ತಿ ತನ್ನ ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ಬದಲಾವಣೆ ಮಾಡಬಹುದು? ಈ ಪ್ರಕ್ರಿಯೆ ನಡೆಸೋದು ಹೇಗೆ? ಇಲ್ಲಿದೆ ಮಾಹಿತಿ.
ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ಬದಲಾಯಿಸಬಹುದು?
ಆಧಾರ್ ಕಾರ್ಡ್ ನಲ್ಲಿ ನೀವು ಎಷ್ಟು ಬಾರಿ ಬೇಕಾದರೂ ವಿಳಾಸ ಬದಲಾಯಿಸಬಹುದು. ಈ ತನಕ ವಿಳಾಸ ಬದಲಾವಣೆಗೆ ಸಂಬಂಧಿಸಿ ಯಾವುದೇ ಮಿತಿ ಹೇರಿಲ್ಲ. ಆದರೆ, ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು. ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆಗೆ ಸಮರ್ಪಕ ಕಾರಣ ನೀಡುವುದು ಅಗತ್ಯ ಎಂದು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.
ಆಧಾರ್ ಯಾಕೆ ಅಪ್ಡೇಟ್ ಮಾಡಬೇಕು?
ಹತ್ತಕ್ಕೂ ಹೆಚ್ಚು ವರ್ಷಗಳಿಂದ ಆಧಾರ್ ಅನ್ನು ಅಪ್ಡೇಟ್ ಮಾಡದೇ ಇದ್ದವರು ಅದನ್ನು ಅಪ್ಡೇಟ್ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಬಹಳಷ್ಟು ಜನರು ಒಮ್ಮೆ ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಅದನ್ನು ಅಪ್ಡೇಟ್ ಮಾಡಿಲ್ಲ. ನಿಮ್ಮ ಪ್ರೊಫೈಲ್ನಲ್ಲಿ ಯಾವುದೇ ಮಾಹಿತಿ ಬದಲಾವಣೆ ಇಲ್ಲದಿದ್ದರೂ ಕೂಡ ಅದನ್ನು ನಮೂದಿಸಿ ಅಪ್ಡೇಟ್ ಮಾಡಬಹುದು.
ವಯಸ್ಸಾದಂತೆ ಬೆರಳು ಸವೆದು ಬೆರಳಚ್ಚು ಗುರುತು ಮಾಸಬಹುದು. ಮೊದಲಿನಂತೆ ಬೆರಳಚ್ಚು ಸರಿಯಾಗಿ ಮೂಡದೇ ಇರಬಹುದು. ಹೀಗಾಗಿ, ಆಧಾರ್ನಲ್ಲಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್ಡೇಟ್ ಮಾಡುವುದು ಅವಶ್ಯಕ ಎಂದು ಹೇಳಲಾಗುತ್ತದೆ.
ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡುವ ಕ್ರಮಗಳು
- ಯುಐಡಿಎಐನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: uidai.gov.in/
- ಈ ವೆಬ್ಸೈಟ್ನಿಂದ ಮೈ ಆಧಾರ್ ಪೋರ್ಟಲ್ಗೆ ಹೋಗಿ.
- ಇಲ್ಲಿ ಆಧಾರ್ ನಂಬರ್ ಮತ್ತು ಒಟಿಪಿ ಮೂಲಕ ಲಾಗಿನ್ ಆಗಿರಿ.
- ಅದರಲ್ಲಿ ನಿಮ್ಮ ಪ್ರೊಫೈಲ್ಗೆ ಹೋಗಿ ಮಾಹಿತಿ ವೀಕ್ಷಿಸಬಹುದು.
- ಎಲ್ಲವೂ ಸರಿ ಇದ್ದರೆ ಒಪ್ಪಿಗೆ ನೀಡಬಹುದು.
- ಒಂದು ವೇಳೆ ವಿಳಾಸ ಮತ್ತಿತರ ಮಾಹಿತಿ ಬದಲಿಸಬೇಕೆಂದಿದ್ದರೆ ಅದನ್ನು ಮಾಡಬಹುದು. ಅದರ ದಾಖಲೆಗಳ ಸ್ಕ್ಯಾನ್ಡ್ ಕಾಪಿ ನಿಮ್ಮ ಬಳಿ ಇರಬೇಕು. ವಿಳಾಸ ಮಾಹಿತಿ ಬದಲಾಯಿಸಬೇಕಿದ್ದರೆ ಹೊಸ ವಿಳಾಸದ ಸಾಕ್ಷ್ಯ ಇರುವ ದಾಖಲೆ ಇರಬೇಕು. ಹೆಸರು ಬದಲಾಯಿಸಲಾಗಿದ್ದರೆ, ಅದಕ್ಕೆ ಪೂರಕ ದಾಖಲೆ ಇರಬೇಕು.