ಬೆಂಗಳೂರು/ನವದೆಹಲಿ:- ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇಂದು ನಿಧನರಾಗಿದ್ದಾರೆ. ಮನಮೋಹನ್ ಸಿಂಗ್ ಅವರು ಭಾರತದ 13ನೇ ಪ್ರಧಾನಿಯಾಗಿ 10 ವರ್ಷಗಳ ಕಾಲ ಭಾರತದಲ್ಲಿ ಆಡಳಿತ ನಡೆಸಿದ್ದಾರೆ, ಆರ್ಥಿಕ ತಜ್ಞರಾಗಿಯು ಸೇವೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರ ನಿಧನದ ಸುದ್ದಿಯಿಂದ ದೇಶಾದ್ಯಂತ ಶೋಕ ಮಡುಗಟ್ಟಿದೆ. 92 ವರ್ಷ ವಯಸ್ಸಿನ ಡಾ.ಮನಮೋಹನ್ ಸಿಂಗ್ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ದೇಶಕ್ಕೆ ಅನೇಕ ಐತಿಹಾಸಿಕ ಸುಧಾರಣೆಗಳು ಮತ್ತು ಯೋಜನೆಗಳನ್ನು ನೀಡಿದರು, ಅದರ ಪರಿಣಾಮವನ್ನು ಇಂದಿಗೂ ಕಾಣಬಹುದು.
ಇನ್ನೂ ಮಾಜಿ ಪ್ರಧಾನಿ ಡಾ. ಸಿ ಎನ್ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ, ಡಿಕೆಶಿ, ಹೆಚ್ಡಿಕೆ, ಜೋಶಿ ಸೇರಿ ಸಾಕಷ್ಟು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಿದ್ದರಾಮಯ್ಯ X ಮಾಡಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅಪಾರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವವು ಭಾರತದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ಯೋಜನೆಗಳಿಗೆ ಅವರಿಂದ ದೊರೆತ ಮಾರ್ಗದರ್ಶನ ಹಾಗೂ ಬೆಂಬಲವನ್ನು ಸ್ಮರಿಸಲೇಬೇಕು. ಯುಪಿಎ ಸರ್ಕಾರದ ಆಹಾರ ಹಕ್ಕು ಕಾಯ್ದೆಯು ನಮ್ಮ ನಾಡಿನ ಪ್ರಗತಿಯ ಹಾದಿಗೆ ಹೊಸ ಆಯಾಮ ಕಲ್ಪಿಸಿಕೊಟ್ಟಿದೆ. ಮಾತಿಗಿಂತ ಕೃತಿ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥದಂತೆ ಬದುಕಿದ ಓರ್ವ ಮುತ್ಸದ್ದಿ ನಾಯಕನನ್ನು ಕಳೆದುಕೊಂಡ ಭಾರತವಿಂದು ಬಡವಾಗಿದೆ. ಮೃತರ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಡಿಕೆ ಶಿವಕುಮಾರ್ X ಮಾಡಿದ್ದು, ರಾಜನೀತಿ, ಸಮಗ್ರತೆ ಮತ್ತು ಶಾಂತ ಶಕ್ತಿಯಿಂದ ವ್ಯಾಖ್ಯಾನಿಸಲಾದ ಯುಗವು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಜಿ ಅವರ ನಿಧನದೊಂದಿಗೆ ಕೊನೆಗೊಳ್ಳುತ್ತದೆ. ಪ್ರಧಾನ ಮಂತ್ರಿಯಾಗಿ ಮತ್ತು ಆರ್ಥಿಕ ವಾಸ್ತುಶಿಲ್ಪಿಯಾಗಿ ರಾಷ್ಟ್ರದ ಬಗ್ಗೆ ಅವರ ದೃಷ್ಟಿಕೋನವು ಅದರ ಅತ್ಯಂತ ನಿರ್ಣಾಯಕ. ಅವರ ಅಗಲಿಕೆಯು ನನಗೆ ವೈಯಕ್ತಿಕ ನಷ್ಟವಾದಂತೆ ಭಾಸವಾಗುತ್ತಿದೆ. ನಿಜವಾದ ಮಣ್ಣಿನ ಮಗನಿಗೆ ವಿದಾಯ ಹೇಳುವ ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಹಾಗೂ ಆತ್ಮೀಯರಿಗೆ ದುಃಖ ಬರಿಸುವ ಶಕ್ತಿ ಕೊಡಲೆಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ X ಮಾಡಿದ್ದು, ಭಾರತದ ಮಾಜಿ ಪ್ರಧಾನಮಂತ್ರಿಗಳು, ಪ್ರಖ್ಯಾತ ವಿತ್ತತಜ್ಞರು, ಆರ್ಥಿಕ ಸುಧಾರಣೆಗಳ ಹರಿಕಾರರೂ ಆಗಿದ್ದ ಡಾ.ಮನಮೋಹನ್ ಸಿಂಗ್ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ದೂರದೃಷ್ಟಿ, ಸಂಯಮ ಮತ್ತು ತಮ್ಮ ಆರ್ಥಿಕ ಮೇದಸ್ಸಿನಿಂದ ರಾಷ್ಟ್ರವನ್ನು ದುರಿತ ಕಾಲದಲ್ಲಿ ಸಶಕ್ತವಾಗಿ ಮುನ್ನಡೆಸಿದ್ದ ಮನಮೋಹನ್ ಸಿಂಗ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ಆರ್ಥಿಕ ಸುಧಾರಣೆಗಳ ಮೂಲಕ ಭಾರತಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟವರು ಅವರು. ಅವರ ಕೊಡುಗೆಗಳು ಚಿರಸ್ಮರಣೀಯ. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಪ್ರಹ್ಲಾದ್ ಜೋಶಿ X ಮಾಡಿದ್ದು, ಭಾರತದ ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞರು, ಹಣಕಾಸು ಸಚಿವರಾಗಿದ್ದ ಶ್ರೀಮನಮೋಹನ್ ಸಿಂಗ್ ರವರು ದೈವಾಧೀನರಾದ ವಿಷಯ ಅತೀವ ನೋವನ್ನು ತಂದಿದೆ. ಮೃತರ ಆತ್ಮಕ್ಕೆ ಸದ್ಗತಿ ಸಿಗಲೆಂದು ನಾನು ಪ್ರಾರ್ಥಿಸುತ್ತೇನೆ. ಡಾ. ಮನಮೋಹನ್ ಸಿಂಗ್ ಅವರ ಸಾವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಈ ಸಮಯಲ್ಲಿ ಅವರ ಕುಟುಂಬಕ್ಕೆ ಧೈರ್ಯ ಸಿಗಲೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಹೆಚ್.ಡಿ ದೇವೇಗೌಡ X ಮಾಡಿದ್ದು, ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ತಿಳಿದು ತುಂಬಾ ದುಃಖವಾಗಿದೆ. ಅವರು ಒಳ್ಳೆಯ ಮತ್ತು ತಾಳ್ಮೆಯ ವ್ಯಕ್ತಿ, ಅದ್ಭುತ ಅರ್ಥಶಾಸ್ತ್ರಜ್ಞ. ನಾನು ಗೌರವಿಸುವ ಮತ್ತು ಮೌಲ್ಯಯುತ ವ್ಯಕ್ತಿತ್ವವುಳ್ಳ ಸಹೋದ್ಯೋಗಿ, ಭಾರತದ ಆರ್ಥಿಕತೆಯ ಭವಿಷ್ಯ ಬದಲಿಸಿದ ವ್ಯಕ್ತಿ ಮನಮೋಹನ್ ಸಿಂಗ್. ಅವರನ್ನ ಇತಿಹಾಸದಲ್ಲಿ ನೆನಪಿಸಿಕೊಳ್ಳುತ್ತಾರೆ ಎಂದಿದ್ದಾರೆ.
ಆರ್. ಅಶೋಕ್ X ಮಾಡಿದ್ದು, ಭಾರತದ ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರು ವಿಧಿವಶರಾದ ಸುದ್ದಿ ತೀವ್ರ ನೋವುಂಟು ಮಾಡಿದೆ. ಕೇಂದ್ರ ಹಣಕಾಸು ಸಚಿವರಾಗಿ, ಆರ್ ಬಿಐ ಗವರ್ನರ್ ಆಗಿ, ಆರ್ಥಿಕ ಸಲಹೆಗಾರರಾಗಿ, ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿ, ಪ್ರಧಾನ ಮಂತ್ರಿಗಳಾಗಿ ಸುಮಾರು ಐದು ದಶಕಗಳ ಕಾಲ ಅನೇಕ ಹುದ್ದೆಗಳಲ್ಲಿ ರಾಷ್ಟ್ರ ಸೇವೆ ಸಲ್ಲಿಸಿದ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ದೇಶ ಒಬ್ಬ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಬಿ.ವೈ ವಿಜಯೇಂದ್ರ X ಮಾಡಿದ್ದು, ದೇಶದ ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವಹಿಸಿ, ಆರ್ಥಿಕ ಉದಾರೀಕರಣದ ರೂವಾರಿಯಾಗಿ ಭಾರತದ ಬೆಳವಣಿಗೆಗೆ ಅಮೋಘ ಕೊಡುಗೆ ನೀಡಿದ್ದ ವಿಶ್ವ ಕಂಡ ಶ್ರೇಷ್ಠ ಆರ್ಥಿಕ ತಜ್ಞರೂ ಆದ ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುವೆ. ಅವರ ಸರಳತೆ, ಸಜ್ಜನಿಕೆಯಿಂದಾಗಿ ಅಪರೂಪದ ವಿನಯವಂತ ಪಾಂಡಿತ್ಯ ಮೂರ್ತಿಯನ್ನು ಅವರಲ್ಲಿ ಕಾಣುವಂತಾಗಿತ್ತು. ಪಕ್ಷಾತೀತವಾಗಿ ಎಲ್ಲರ ಹೃದಯದಲ್ಲೂ ಸ್ನೇಹದ ಬಾಂಧವ್ಯ ಬೆಸೆದಿದ್ದ ಅವರು ಅಕ್ಷರಶಃ ಅಜಾತಶತ್ರುವಾಗಿದ್ದರು. ಎಂದೂ ಯಾರೊಂದಿಗೂ ವಿರಸ ಕಟ್ಟಿಕೊಳ್ಳದೇ ಒಬ್ಬ ಶಿಸ್ತು ಬದ್ಧ ಆರ್ಥಿಕ ಸಲಹೆಗಾರರಾಗಿ, ಸರಳತೆಯ ರಾಜಕಾರಣಿಯಾಗಿ, ಭಾರತದ ಪ್ರಧಾನಿಗಳಾಗಿ ಅವರ ಹತ್ತು ವರ್ಷಗಳ ಸುದೀರ್ಘ ಸೇವೆ ಮಹತ್ವದ ಮೈಲಿಗಲ್ಲು. ಭಾರತೀಯ ರಿಸರ್ವ್ ಬ್ಯಾಂಕ್’ನ ಗವರ್ನರ್ ಆಗಿ, ದೇಶದ ವಿತ್ತ ಸಚಿವರಾಗಿ ಅವರು ಇಟ್ಟ ಹೆಜ್ಜೆಗಳು ಆರ್ಥಿಕ ಸುಧಾರಣೆಯ ಮಹತ್ವದ ತಿರುವುಗಳು. ಮನಮೋಹನ್ ಸಿಂಗ್ ಅವರ ಅಗಲಿಕೆಯಿಂದ ಒಬ್ಬ ಸಜ್ಜನಿಕೆಯ ಆಡಳಿತಗಾರರನ್ನಷ್ಟೇ ದೇಶ ಕಳೆದುಕೊಂಡಿಲ್ಲ, ಮೃದು ಭಾಷೆಯ ಒಬ್ಬ ಮಹಾನ್ ಶ್ರೇಷ್ಠ ಆರ್ಥಿಕ ತಜ್ಞನನ್ನು ಕಳೆದುಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ಭಾರತದ ಇತಿಹಾಸದಲ್ಲಿ ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವ, ಕೊಡುಗೆ ಮರೆಯುವಂತದ್ದಲ್ಲ ಎಂದಿದ್ದಾರೆ.
ಅದರಂತೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ X ನಲ್ಲಿ ತೀವ್ರ ಸಂತಾಪ ಸೂಚಿಸಿದ್ದಾರೆ. ಮನಮೋಹನ್ ಸಿಂಗ್ ಅವರು ಭಾರತವನ್ನು ಅಪಾರ ಬುದ್ಧಿವಂತಿಕೆ ಮತ್ತು ಸಮಗ್ರತೆಯಿಂದ ಮುನ್ನಡೆಸಿದರು. ಅವರ ನಮ್ರತೆ ಮತ್ತು ಅರ್ಥಶಾಸ್ತ್ರದ ಆಳವಾದ ತಿಳುವಳಿಕೆಯು ರಾಷ್ಟ್ರವನ್ನು ಪ್ರೇರೇಪಿಸಿತು ಎಂದು ನೆನಪಿಸಿಕೊಂಡಿದ್ದಾರೆ.
ನಾನು ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ. ಅವರನ್ನು ಮೆಚ್ಚಿದ ಲಕ್ಷಾಂತರ ಜನರು ಅವರನ್ನು ಅತ್ಯಂತ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ಶ್ರೀಮತಿ ಕೌರ್ (ಸಿಂಗ್ ಅವರ ಪತ್ನಿ) ಮತ್ತು ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಎಕ್ಸ್ನಲ್ಲಿ ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
ಇನ್ನೂ ಎರಡು ಬಾರಿ ಪ್ರಧಾನಿಯಾಗಿ ಹಾಗೂ ಸಂಸತ್ತಿನ ಮೇಲ್ಮನೆಯಲ್ಲಿ 33 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿ ಎನಿಸಿಕೊಂಡಿದ್ದಾರೆ.