ನವದೆಹಲಿ:- ಮನಮೋಹನ್ ಸಿಂಗ್ ನನಗೆ
ಮಾರ್ಗದರ್ಶಕರಾಗಿದ್ದರು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಮನಮೋಹನ್ ಸಿಂಗ್ ನಿಧನಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು. ಮನಮೋಹನ್ ಸಿಂಗ್ ಅವರ ತಿಳಿವಳಿಕೆ, ಉದಾತ್ತಗುಣ, ವಿನಯವಂತಿಕೆ ಗುಣಗಳನ್ನು ಒತ್ತಿ ಹೇಳಿರುವ ಸೋನಿಯಾ, ಮಾಜಿ ಪ್ರಧಾನಿಯ ಅಗಲಿಕೆಯು ತುಂಬಲಾರದ ನಷ್ಟ, ನನ್ನ ಪಾಲಿಗಿದು ವೈಯಕ್ತಿಕ ನಷ್ಟ ಎಂದು ಹೇಳಿದ್ದಾರೆ.
ಮನಮೋಹನ್ ಸಿಂಗ್ ಅವರು ನನ್ನ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾಗಿದ್ದರು. ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ಅಪಾರ ನಷ್ಟವಾಗಿದೆ. ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಮನಮೋಹನ್ ಸಿಂಗ್ ಸಲ್ಲಿಸಿರುವ ಅಪಾರವಾದ ಕೊಡುಗೆಯನ್ನು ಅಳೆಯಲಾಗದು. ಅವರಂತಹ ನಾಯಕರನ್ನು ಹೊಂದಿದ್ದಕ್ಕಾಗಿ ಇಡೀ ದೇಶ ಮತ್ತು ನಮ್ಮ ಪಕ್ಷ ಹೆಮ್ಮೆಪಡುತ್ತದೆ, ಅವರಿಗೆ ಯಾವಾಗಲೂ ಕೃತಜ್ಞರಾಗಿದ್ದೇವೆ ಎಂದು ಭಾವುಕ ನುಡಿಗಳನ್ನಾಡಿದ್ದಾರೆ
ದೇಶಕ್ಕಾಗಿ ಹೃದಯವಂತಿಕೆ ಮತ್ತು ಮನಸ್ಸಿನಿಂದ ಮನಮೋಹನ್ ಸಿಂಗ್ ಸೇವೆ ಸಲ್ಲಿಸಿದ್ದರು. ದೇಶದ ಪ್ರತಿಯೊಬ್ಬರ ಹೃದಯದಲ್ಲಿ ಮನಮೋಹನ್ ಅವರ ಮೇಲಿನ ಪ್ರೀತಿ ಅಡಗಿದೆ. ಆದ್ರೆ ನನ್ನ ಪಾಲಿಗೆ ಮನಮೋಹನ ಅವರ ನಿಧನವು ವೈಯಕ್ತಿಕ ನಷ್ಟವಾಗಿದೆ. ಅವರು ಸದಾ ಸೌಮ್ಯವಾಗಿರುತ್ತಿದ್ದರು ಮತ್ತು ದೃಢನಿಶ್ಚಯ ಹೊಂದಿದ್ದರು. ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅವರ ಬದ್ಧತೆಯು ಅಚಲವಾಗಿತ್ತು ಎಂದು ಗುಣಗಾನ ಮಾಡಿದ್ದಾರೆ.