ಹುಬ್ಬಳ್ಳಿ : ಸೇವಾಭಾರತಿ ಟ್ರಸ್ಟ್ನ ಇಲ್ಲಿನ ಬಾಲ ಕಲ್ಯಾಣ ಕೇಂದ್ರದಲ್ಲಿ ಬೆಳೆದು, ವಿದ್ಯಾಭ್ಯಾಸ ಮಾಡಿದ ಯುವತಿ ಅನ್ನಪೂರ್ಣೆಶ್ವರಿಯ ವಿವಾಹ ನಿಶ್ಚಯವಾಗಿದ್ದು, ಗದಗ ಜಿಲ್ಲೆ ಹೊಳೆ ಆಲೂರಿನ ಸಾಫ್ಟ್ ವೇರ್ ಇಂಜಿನಿಯರ್ ವಿನೋದಕುಮಾರನೊಂದಿಗೆ ನ. 23ರಂದು ಮದುವೆ ನಡೆಯಲಿದೆ.
ಕೋಟಿ ಕೋಟಿ ಸಿಮ್ ಕಾರ್ಡ್ ದಿಢೀರ್ ಬ್ಲಾಕ್! ನಿಮ್ಮ ಮೊಬೈಲ್ ಒಮ್ಮೆ ಚೆಕ್ ಮಾಡಿ!
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ, ಅನಾಥ ಹಾಗೂ ಪಾಲಕರಿಗೆ ಸಲಹಲು ಸಾಧ್ಯವಾಗದ ಹೆಣ್ಣು ಮಕ್ಕಳನ್ನು ಇಲ್ಲಿನ ಬಾಲ ಕಲ್ಯಾಣ ಕೇಂದ್ರದಲ್ಲಿ ಸಲಹಿ, ವಿದ್ಯಾಭ್ಯಾಸ ನೀಡಲಾಗುವುದು. ನಂತರ ಆಕೆಯ ವಿವಾಹವನ್ನೂ ಮಾಡುತ್ತೇವೆ ಎಂದರು. ಬಾಲ ಕಲ್ಯಾಣ ಕೇಂದ್ರದಲ್ಲಿ ಬೆಳೆದ ಆರು ಯುವತಿಯರ ವಿವಾಹ ಇದುವರೆಗೆ ಮಾಡಲಾಗಿದ್ದು, ಇದು 7ನೇ ವಿವಾಹ. ಇದೀಗ ವಿವಾಹ ನಿಶ್ಚಯವಾಗಿರುವ ಅನ್ನಪೂರ್ಣೆಶ್ವರಿ ಅನಾಥೆಯಾಗಿದ್ದು, 11 ವರ್ಷಗಳ ಹಿಂದೆ ಆಕೆಯ ಸಂಬಂಧಿಕರು ಆಕೆಯನ್ನು ಕರೆತಂದಿದ್ದರು ಎಂದು ಹೇಳಿದರು.
ಬಿಇ ಪೂರ್ಣಗೊಳಿಸಿರುವ ಅನ್ನಪೂಣೇಶ್ವರಿ, ಸೇವಾಭಾರತಿ ಟ್ರಸ್ಟ್ನ ವಿವಿಧ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ಬಾಲ ಕಲ್ಯಾಣ ಕೇಂದ್ರದಲ್ಲಿ ಸಧ್ಯ 1ನೇ ತರಗತಿಯಿಂದ ಡಿಗ್ರಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ 35 ಹೆಣ್ಣು ಮಕ್ಕಳು ಇದ್ದಾರೆ ಎಂದು ತಿಳಿಸಿದರು. ಇಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಅವರ ಒಪ್ಪಿಗೆ ಮೇರೆಗೆ ಬಾಲ ಕಲ್ಯಾಣ ಕೇಂದ್ರದಿಂದಲೇ ವಿವಾಹ ಮಾಡಿಕೊಡುತ್ತೇವೆ. ಮನೆ ಮಕ್ಕಳಿಗಿಂತ ಹೆಚ್ಚಾಗಿ ಇಲ್ಲಿನ ಹೆಣ್ಣು ಮಕ್ಕಳು ಮದುವೆಯಾದ ನಂತರವೂ ಸುಖವಾಗಿ ಇರಬೇಕು. ಇದೇ ಕಾರಣಕ್ಕಾಗಿ ವಿವಾಹವಾಗುವ ವರನ ಆರೋಗ್ಯ, ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ ಎಂದು ಹೇಳಿದರು.
ಅನ್ನಪೂಣೇಶ್ವರಿಯನ್ನು ವಿವಾಹವಾಗುತ್ತಿರುವ ವಿನೋದಕುಮಾರನಿಗೆ ತಾಯಿ ಇದ್ದು, ಸ್ವಂತ ಮನೆ ಇದೆ. ಅಂಗಡಿಗಳನ್ನೂ ಬಾಡಿಗೆ ನೀಡಿದ್ದಾರೆ. ಸಧ್ಯ ಹೈದ್ರಾಬಾದ್ನಲ್ಲಿ ಉದ್ಯೋಗಿಯಾಗಿದ್ದು, ಶೀಘ್ರ ಬೆಂಗಳೂರಿಗೆ ವರ್ಗಾವಣೆಗೊಳ್ಳಲಿದ್ದಾನೆ ಎಂದರು. ಈಗಾಗಲೇ ವಿವಾಹವಾಗಿರುವ ಕೇಂದ್ರದ ಆರೂ ಜನ ಹೆಣ್ಣು ಮಕ್ಕಳು ತಮ್ಮ ಕುಟುಂಬದ ಸಮೇತ ಈ ವಿವಾಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನ. 22ರಂದು ಬೆಳಗ್ಗೆ ಬಳೆ ಇಡಿಸಿಕೊಳ್ಳುವ ಕಾರ್ಯಕ್ರಮ, ಸಂಜೆ ನಿಶ್ಚಿತಾರ್ಥ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲ ಸಮಾಜದವರು ಪಾಲ್ಗೊಳ್ಳಲಿದ್ದಾರೆ. ಸಂಘ ಪರಿವಾರ ಮೂಲದ ಚನ್ನವೀರಪ್ಪ ಚನ್ನಪ್ಪನವರ ದಂಪತಿ ಕನ್ಯಾದಾನ ಮಾಡಲಿದ್ದಾರೆ ಎಂದು ವಿವರಿಸಿದರು.
ಭಾರತಿ ನಂದಕುಮಾರ, ವೀಣಾ ಮಳಿಯೆ, ಮಂಜುಳಾ ಕೃಷ್ಣನ್, ನಂದಾ ಸವಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.