ಮಂಡ್ಯ:– ಕಳೆದ ಲೋಕಸಭಾ ಚುನಾವಣೆ ತೋರಿಸಿಕೊಟ್ಟಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ, ದೇಶದಲ್ಲಿಯೇ ಅತೀ ಹೆಚ್ಚು ಸೌಂಡ್ ಮಾಡಿತ್ತು. ಇದಕ್ಕೆ ಕಾರಣವಾಗಿದ್ದು ನಿಖಿಲ್ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರ ನಡುವಿನ ಸ್ಪರ್ಧೆ. ಇವರಿಬ್ಬರ ನಡುವೆ ನಡೆದ ಲೋಕಸಭಾ ಕುರುಕ್ಷೇತ್ರದಲ್ಲಿ ಸಂಸದೆ ಸುಮಲತಾ ಅಂಬರೀಶ್ ಗೆದ್ದು ಬೀಗಿದ್ದರು. ಇನ್ನು ಮಂಡ್ಯ ಲೋಕಸಭಾ ಕುರುಕ್ಷೇತ್ರದ ಚಕ್ರವ್ಯೂಹವನ್ನು ಬೇಧಿಸಲಾಗದೆ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದರು.
ಅಂದಹಾಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ನಿಖಿಲ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಕಣಕ್ಕಿಳಿದು ಅಲ್ಲಿಯೂ ಕೂಡ ಸೋಲು ಕಂಡಿದ್ದರು. ಇದೀಗ ಮೊದಲು ಸೋತ ಜಾಗದಲ್ಲೇ ಗೆಲುವು ಕಾಣಬೇಕೆಂದು ನಿಖಿಲ್ ಮತ್ತೆ ಮಂಡ್ಯದಿಂದ ಲೋಕಸಭಾ ಕ್ಷೇತ್ರದಿಂದ ಅಗ್ನಿ ಪರೀಕ್ಷೆ ಎದುರಿಸಲು ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ನಿಖಿಲ್ ಕುಮಾರಸ್ವಾಮಿ ಅವರು ಇದೇ ತಿಂಗಳು ಮಂಡ್ಯ ಲೋಕಸಭಾ ಕ್ಷೇತ್ರದ ಪ್ರವಾಸಕ್ಕೆ ಮುಂದಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳ ರೌಂಡ್ಗೆ ನಿಖಿಲ್ ಮುಂದಾಗಿದ್ದಾರೆ.
ಇನ್ನು ಒಂದೊಂದು ದಿನ ಒಂದೊಂದು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿರುವ ನಿಖಿಲ್, ಇಡೀ ದಿನ ಆ ಕ್ಷೇತ್ರವನ್ನು ಸುತ್ತಲಿದ್ದಾರೆ. ಕಳೆದ ಬಾರಿ ಆದ ತಪ್ಪುಗಳನ್ನು ಮರುಕಳಿಸ ಬಾರದೆಂದು ನಿಖಿಲ್ ಎಲ್ಲಾ ಘಟಕದ ಪದಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ಮಾಡಲಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆಯೂ ಮನವರಿಕೆ ಮಾಡಲಿದ್ದಾರೆ. ನಿಖಿಲ್ ಅವರ ಮಂಡ್ಯ ಲೋಕಸಭಾ ಕ್ಷೇತ್ರದ ಈ ಪ್ರವಾಸದಿಂದ ನಿಖಿಲ್ ಅವರೇ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆಗುವುದು ಗ್ಯಾರಂಟಿ ಎಂದು ಮಂಡ್ಯ ರಾಜಕೀಯ ಪಡಸಾಲೆಯಲ್ಲಿ ಈಗಾಗಲೇ ಚರ್ಚೆಗಳು ಆರಂಭವಾಗಿವೆ.