ಕನ್ನಡ, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಘಳಿಸಿದ್ದ ಮಮತಾ ಕುಲಕರ್ಣಿ ಸನ್ಯಾಸತ್ವ ಸ್ವೀಕರಿಸಿದ್ದರು. ಇತ್ತೀಚೆಗೆ ಅವರಿಗೆ ಕಿನ್ನರ್ ಅಖಾಡದ ಮಹಾಮಂಡಲೇಶ್ವರ ಸ್ಥಾನವನ್ನು ನೀಡಲಾಗಿತ್ತು. ನಟಿ ಈ ಸ್ಥಾನವನ್ನು ಕೋಟ್ಯಾಂತರ ರೂಪಾಯಿ ನೀಡಿ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಜೊತೆಗೆ ನಟಿಗೆ ಈ ಸ್ಥಾನ ನೀಡಿದ್ದಕ್ಕೆ ಹಲವರು ವಿರೋಧಸ ವ್ಯಕ್ತಪಡಿಸಿದ್ದರು. ಆದ್ದರಿಂದ ಅವರನ್ನು ಮಹಾಮಂಡಲೇಶ್ವರ ಸ್ಥಾನದಿಂದ ವಜಾ ಮಾಡಲಾಗಿತ್ತು. ಈಗ ಮಮತಾ ಕುಲಕರ್ಣಿ ಅವರು ರಾಜಿನಾಮೆ ನೀಡಿದ್ದಾರೆ. ವಿಡಿಯೋ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ನಟಿ ಸ್ಪಷ್ಟಪಡಿಸಿದ್ದಾರೆ.
ಮಮತಾ ಕುಲಕರ್ಣಿಗೆ ಮಹಾಮಂಡಲೇಶ್ವರ ಸ್ಥಾನ ನೀಡಿದ್ದಕ್ಕೆ ಆಚಾರ್ಯ ಮಹಾಮಂಡಲೇಶ್ವರ್ ಲಕ್ಷ್ಮಿ ನಾರಾಯಣ್ ತ್ರಿಪಾಠಿ ಹಾಗೂ ಕಿನ್ನರ್ ಅಖಾಡ ಸಂಸ್ಥಾಪಕ ರಿಷಿ ಅಜಯ್ ದಾಸ್ ನಡುವೆ ಬಿರುಕು ಮೂಡಿತ್ತು. ‘ಈಗ ನಾನು ಮಹಾಮಂಡಲೇಶ್ವರ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. 25 ವರ್ಷಗಳಿಂದ ನಾನು ಸಾಧ್ವಿ ಆಗಿದ್ದೇನೆ. ನಾನು ಸಾಧ್ವಿ ಆಗಿಯೇ ಉಳಿಯುತ್ತೇನೆ’ ಎಂದು ಮಮತಾ ಕುಲಕರ್ಣಿ ಹೇಳಿದ್ದಾರೆ.
ಸನ್ಯಾನಿಸಿ ಆದ ಬಳಿಕ ಶ್ರೀ ಯಮಾಯಿ ಮಮತಾ ನಂದಗಿರಿ ಎಂಬ ಹೆಸರಿನಿಂದ ಮಮತಾ ಕುಲಕರ್ಣಿ ಅವರು ಗುರುತಿಸಿಕೊಂಡಿದ್ದರು. ಮಹಾಕುಂಭಮೇಳದಲ್ಲಿ ಜನವರಿ 24ರಂದು ಅವರನ್ನು ಕಿನ್ನರ್ ಅಖಾಡದ ಮಹಾಮಂಡಲೇಶ್ವರ ಆಗಿ ನೇಮಕ ಮಾಡಲಾಗಿತ್ತು. ಅದನ್ನು ಯೋಗ ಗುರು ಬಾಬಾ ರಾಮ್ದೇವ್ ಅವರು ಟೀಕಿಸಿದ್ದರು. ಒಂದೇ ದಿನದಲ್ಲಿ ಯಾರೂ ಕೂಡ ಸನ್ಯಾಸತ್ವ ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.
‘ನಾನು ಮಹಾಮಂಡಲೇಶ್ವರ ಸ್ಥಾನಕ್ಕೆ ನೇಮಕ ಆದ ಬಳಿಕ ಎದ್ದಿರುವ ವಿವಾದ ಅನವಶ್ಯಕವಾಗಿದ್ದು. 25 ವರ್ಷಗಳ ಹಿಂದೆಯೇ ನಾನು ಬಾಲಿವುಡ್ ತೊರೆದಿದ್ದೆ. ಜನಪ್ರಿಯತೆಯಿಂದ ಮರೆಯಾಗಿದ್ದೆ. ಎಲ್ಲದರಿಂದಲೂ ದೂರ ಉಳಿದುಕೊಂಡೆ. ಈಗ ನಾನು ಮಾಡುವ ಎಲ್ಲ ಕೆಲಸಗಳನ್ನು ಜನರು ಟೀಕಿಸುತ್ತಿದ್ದಾರೆ. ಈಗ ನನ್ನನ್ನು ಮಹಾಮಂಡಲೇಶ್ವರ ಸ್ಥಾನಕ್ಕೆ ನೇಮಕ ಮಾಡಿದ್ದಕ್ಕೂ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾನು ಕೈಲಾಸಕ್ಕೆ ಅಥವಾ ಮಾನಸ ಸರೋವರಕ್ಕೆ ಹೋಗುವ ಅವಶ್ಯಕತೆ ಇಲ್ಲ’ ಎಂದು ಮಮತಾ ಕುಲಕರ್ಣಿ ಹೇಳಿದ್ದಾರೆ.