ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ತಿಂದ ಬಳಿಕ ನಾವದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಅದೇ ಸಿಪ್ಪೆಯಿಂದ ಎಂತೆಂತಹ ರುಚಿಕರವಾದ ಅಡುಗೆಗಳನ್ನು ಮಾಡಬಹುದು ಎಂಬುದು ನಿಮಗೆ ತಿಳಿದಿದೆಯಾ? ಕಲ್ಲಂಗಡಿ ಸಿಪ್ಪೆಯ ರಾಯಿತಾ ಮಾಡುವುದು ಹೇಗೆಂದು ನಾವು ಇತ್ತೀಚೆಗಷ್ಟೇ ಹೇಳಿಕೊಟ್ಟಿದ್ದೇವೆ. ಇಂದು ನಾವು ಕಲ್ಲಂಗಡಿ ಸಿಪ್ಪೆ ಬಳಸಿಕೊಂಡು ದೋಸೆ (Watermelon Rind Dosa) ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತೇವೆ. ನೀವು ಕೂಡಾ ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯದೇ ಈ ರೀತಿ ಡಿಫರೆಂಟ್ ರೆಸಿಪಿಗಳನ್ನು ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು:
ದೋಸೆ ಅಕ್ಕಿ – 4 ಕಪ್
ಕಲ್ಲಂಗಡಿ ಸಿಪ್ಪೆ – 2 ಕಪ್
ಉದ್ದಿನಬೇಳೆ – ಅರ್ಧ ಕಪ್
ಮೆಂತ್ಯ – 2 ಟೀಸ್ಪೂನ್
ಮಂಡಕ್ಕಿ – 2 ಕಪ್
ತೆಂಗಿನ ತುರಿ – ಅರ್ಧ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ದೋಸೆ ಮಾಡಲು ಬೇಕಾಗುವಷ್ಟು
ಮಾಡುವ ವಿಧಾನ:
* ಮೊದಲಿಗೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು, ಅದರ ಹಸಿರು ಪದರವನ್ನು ಪೀಲರ್ ಸಹಾಯದಿಂದ ತೆಗೆದುಹಾಕಿ. ನಮಗೆ ದೋಸೆ ಮಾಡಲು ಸಿಪ್ಪೆಯ ಬಿಳಿ ಪದರ ಮಾತ್ರ ಉಪಯೋಗಕ್ಕೆ ಬರುತ್ತದೆ. ಬಳಿಕ ಅದನ್ನು ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕಿಡಿ.
* ಅಕ್ಕಿ ಹಾಗೂ ಉದ್ದಿನಬೇಳೆಯನ್ನು ತೊಳೆದು, 4-5 ಗಂಟೆಗಳ ಕಾಲ ನೆನೆಸಿಡಿ. ಅಕ್ಕಿಯನ್ನು ರುಬ್ಬುವುದಕ್ಕೂ 1 ಗಂಟೆ ಮೊದಲು ಮಂಡಕ್ಕಿಯನ್ನು ಸೇರಿಸಿ ನೆನೆಸಿ.
* ಈಗ ಮಿಕ್ಸರ್ ಜಾರ್ಗೆ ಕತ್ತರಿಸಿಟ್ಟ ಕಲ್ಲಂಗಡಿ ಹಣ್ಣಿನ ಸಿಪ್ಪೆ ಹಾಗೂ ತೆಂಗಿನ ತುರಿ ಹಾಕಿ ನೀರನ್ನು ಸೇರಿಸದೇ ಸ್ವಲ್ಪ ರುಬ್ಬಿಕೊಳ್ಳಿ.
* ಈಗ ನೆನೆಸಿದ ಅಕ್ಕಿ ಮಿಶ್ರಣವನ್ನು ಸೇರಿಸಿ, ಎಲ್ಲವನ್ನೂ ನಯವಾಗಿ ರುಬ್ಬಿಕೊಳ್ಳಿ.
* ಬಳಿಕ ಹಿಟ್ಟಿಗೆ ಉಪ್ಪು ಸೇರಿಸಿ, ಮಿಶ್ರಣ ಮಾಡಿ 6-7 ಗಂಟೆಗಳ ಕಾಲ ಹುದುಗಲು ಬಿಡಿ. (ರಾತ್ರಿಯಿಡೀ ಹುದುಗಲು ಬಿಡಬಹುದು)
* ಬೆಳಗ್ಗೆ ದೋಸೆ ಹಿಟ್ಟಿನ ಸ್ಥಿರತೆ ಪರಿಶೀಲಿಸಿ, ಅಗತ್ಯವಿದ್ದರೆ ಇನ್ನಷ್ಟು ನೀರು ಸೇರಿಸಿ ಮಿಶ್ರಣ ಮಾಡಿ.
* ಈಗ ದೋಸೆ ಮಾಡುವ ತವಾ ಬಿಸಿ ಮಾಡಿ, ಒಂದು ಸೌಟು ಹಿಟ್ಟನ್ನು ಸುರಿದು, ದೋಸೆಯನ್ನು ದಪ್ಪನೆ ಹರಡಿ. ಕೆಲ ಹನಿ ಎಣ್ಣೆ ಹಾಕಿ, ಮುಚ್ಚಿ ದೋಸೆಯನ್ನು ಬೇಯಿಸಿ.
* ದೋಸೆ 2 ನಿಮಿಷ ಕಾದ ಬಳಿಕ ಮಗುಚಿ ಹಾಕಿ 1 ನಿಮಿಷ ಕಾಯಿಸಿಕೊಳ್ಳಿ.
* ಇದೀಗ ಕಲ್ಲಂಗಡಿ ಹಣ್ಣಿನ ಸಿಪ್ಪೆಯ ದೋಸೆ ತಯಾರಾಗಿದ್ದು, ಚಟ್ನಿಯೊಂದಿಗೆ ಸವಿಯಿರಿ.