ಸುಗ್ಗಿಯ ಕಾಲದಲ್ಲಿ ಆಚರಿಸುವ ಹಾಗೂ ಸೂರ್ಯ ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ಪವಿತ್ರ ದಿನವನ್ನು ಮಕರ ಸಂಕ್ರಾಂತಿಯಾಗಿ ಆಚರಿಸುತ್ತೇವೆ. ಸೂರ್ಯ ತನ್ನ ಮಗ, ಮಕರ ರಾಶಿಯ ಅಧಿಪತಿ ಶನಿಯ ಮನೆಗೆ ಹೋಗುತ್ತಾನೆ ಎನ್ನುವುದು ನಂಬಿಕೆ. ಹೀಗಾಗಿ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಈ ಹಬ್ಬದ ವಿಶೇಷ ಮಾಹಿತಿ ಇಲ್ಲಿದೆ.
ಮಕರ ಸಂಕ್ರಾಂತಿ ಇತಿಹಾಸ:
ಸಂಕ್ರಾಂತಿಯನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ. ದಂತಕಥೆಯ ಪ್ರಕಾರ, ಸಂಕ್ರಾಂತಿಯು ಶಂಕರಾಸುರ ಎಂಬ ರಾಕ್ಷಸನನ್ನು ಕೊಂದಿತು. ಮಕರ ಸಂಕ್ರಾಂತಿಯ ಮುಂದಿನ ದಿನವನ್ನು ಕರಿದಿನ ಅಥವಾ ಕಿಂಕ್ರಾಂತ ಎಂದು ಕರೆಯಲಾಗುತ್ತದೆ. ಸಂಕ್ರಾಂತಿ ದೇವತೆಯನ್ನು ಹೊರತುಪಡಿಸಿ, ಮಕರ ಸಂಕ್ರಾಂತಿಯನ್ನು ಭಾರತದ ಎರಡು ಮಹಾಕಾವ್ಯ ಗ್ರಂಥಗಳಾದ ಪುರಾಣಗಳು ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಕೆಲವು ನಂಬಿಕೆಗಳ ಪ್ರಕಾರ, ವೈದಿಕ ಋಷಿ ವಿಶ್ವಾಮಿತ್ರನು ಈ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದನು ಮತ್ತು ಮಹಾಭಾರತದಲ್ಲಿ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಈ ಹಬ್ಬವನ್ನು ಆಚರಿಸಿದರು ಎನ್ನುವ ನಂಬಿಕೆಯಿದೆ.
ಮಕರ ಸಂಕ್ರಾಂತಿ ಮಹತ್ವ:
ಮಕರ ಸಂಕ್ರಾಂತಿಯು ಸೂರ್ಯ ದೇವನಿಗೆ ಮೀಸಲಾಗಿದೆ. ಈ ಹಬ್ಬವು ಹಿಂದೂಗಳಿಗೆ ಉತ್ತರಾಯಣ ಕಾಲ ಎಂದು ಕರೆಯಲ್ಪಡುವ ಆರು ತಿಂಗಳ ಮಂಗಳಕರ ಅವಧಿಯ ಆರಂಭವನ್ನು ಸಂಕೇತಿಸುತ್ತದೆ. ಇದು ಆಧ್ಯಾತ್ಮಿಕ ಆಚರಣೆಗಳಿಗೆ ಮಹತ್ವದ ಅವಧಿ ಎಂದು ಪರಿಗಣಿಸಲಾಗಿದೆ. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ, ಗಂಗಾ ಮತ್ತು ಜಮುನಾ ಸಂಗಮದಲ್ಲಿ ಲಕ್ಷಾಂತರ ಜನರು ಪವಿತ್ರ ಸ್ನಾನ ಮಾಡುತ್ತಾರೆ. ಈ ಪವಿತ್ರ ಸ್ನಾನವು ಜನ್ಮ ಜನ್ಮಗಳ ಪಾಪಗಳನ್ನು ಕಳೆಯುತ್ತದೆ ಎನ್ನುವ ನಂಬಿಕೆಯಿದೆ. ಜನರು ತಮ್ಮ ಪ್ರಾರ್ಥನೆಗಳನ್ನು ಸೂರ್ಯ ದೇವರಿಗೆ ಸಲ್ಲಿಸುತ್ತಾರೆ.
ಮಕರ ಸಂಕ್ರಾಂತಿ ದಿನ ಎಳ್ಳು – ಬೆಲ್ಲ:
ಮಕರ ಸಂಕ್ರಾಂತಿಯ ದಿನದಂದು ಎಳ್ಳು ಮತ್ತು ಬೆಲ್ಲಕ್ಕೆ ಹೆಚ್ಚಿನ ಮಹತ್ವವಿದೆ. ಆದುದರಿಂದ ಇದನ್ನು ತಿಲ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಮಕರ ಸಂಕ್ರಾಂತಿಯ ದಿನ ಬೆಲ್ಲ, ಎಳ್ಳು ತಿನ್ನುವುದಲ್ಲದೇ, ನೀರಿನಲ್ಲಿ ಎಳ್ಳು ಸೇರಿಸಿ ಸ್ನಾನ ಮಾಡುತ್ತಾರೆ. ಈ ದಿನ ಎಳ್ಳು – ಬೆಲ್ಲವನ್ನು ಪರಸ್ಪರ ಹಂಚುವ ಮೂಲಕ ಹಬ್ಬದ ಖುಷಿಯನ್ನು ಸಂಭ್ರಮಿಸಲಾಗುತ್ತದೆ.
ಮಕರ ಸಂಕ್ರಾಂತಿ ಆಚರಿಸುವ ವಿಧಾನ:
ಮಕರ ಸಂಕ್ರಾಂತಿ ದಿನದಂದು ಮುಂಜಾನೆ ಬೇಗ ಎದ್ದು ಪವಿತ್ರ ನದಿಗಳಲ್ಲಿ ಸ್ನಾನ ಮಾಡಬೇಕು. ಒಂದು ವೇಳೆ ಪವಿತ್ರ ನದಿ ಸ್ನಾನ ಮಾಡಲು ಸಾಧ್ಯವಾಗದೇ ಇದ್ದರೆ ಮನೆಯಲ್ಲೇ ಸ್ನಾನ ಮಾಡುವ ನೀರಿಗೆ ಗೋಮೂತ್ರ ಅಥವಾ ಗಂಗಾಜಲ ಬೆರೆಸಿ ಸ್ನಾನ ಮಾಡಬಹುದು. ಮನೆಯ ಮಹಿಳೆಯರು ಶುದ್ಧರಾದ ಬಳಿಕ ಮನೆಯ ಅಂಗಳದಲ್ಲಿ ರಂಗೋಲಿಯಲ್ಲಿ ಹಾಕಬೇಕು. ನಂತರ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸಿ ಪೂಜೆಯನ್ನು ಮಾಡಬೇಕು. ಈ ದಿನ ಶನಿ ದೇವನನ್ನು ಪೂಜಿಸುವುದು ಕೂಡ ಮಂಗಳಕರವಾಗಿರುತ್ತದೆ. ಈ ದಿನ ಪೂಜೆಯ ನಂತರ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನವನ್ನು ಮಾಡಬೇಕು.