ಬ್ಯಾಂಕ್ ನಲ್ಲಿ ಸ್ಥಿರ ಠೇವಣಿ (ಎಫ್ ಡಿ) ಹೊಂದಿರೋರಿಗೆ ಶುಭಸುದ್ದಿ ಇದೆ. ಪ್ರಸಕ್ತ ಹಣಕಾಸು ಸಾಲಿನ ಮೊದಲ ಐದು ತಿಂಗಳಲ್ಲಿ ಬ್ಯಾಂಕ್ ಕ್ರೆಡಿಟ್ ನಲ್ಲಿ ಬೆಳವಣಿಗೆಯಾಗಿರೋದು ಠೇವಣಿಗಳಲ್ಲಿ ಏರಿಕೆಯಾಗಲು ಕಾರಣವಾಗಿದೆ. ಇದರ ಪರಿಣಾಮವಾಗಿ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಅವಧಿಯಲ್ಲಿ ಸರಾಸರಿ ಟರ್ಮ್ ಡೆಫಾಸಿಟ್ ದರಗಳಲ್ಲಿ 27 ಬೇಸಿಸ್ ಪಾಯಿಂಟ್ಸ್ ಹೆಚ್ಚಳವಾಗುವ ನಿರೀಕ್ಷೆಯಿದೆ.
ಆರ್ ಬಿಐ ಅಂಕಿಅಂಶಗಳ ಪ್ರಕಾರ 2023ರ ಅವಧಿಯಲ್ಲಿ ಬ್ಯಾಂಕ್ ಠೇವಣಿಗಳಲ್ಲಿ ಶೇ.6.6ರಷ್ಟು ಹೆಚ್ಚಳವಾಗಿದ್ದು, 149.2 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದೇ ಅವಧಿಯಲ್ಲಿ ಬ್ಯಾಂಕ್ ಕ್ರೆಡಿಟ್ ನಲ್ಲಿ ಶೇ.9.1ರಷ್ಟು ಹೆಚ್ಚಳವಾಗಿದ್ದು, 124.5 ಲಕ್ಷ ಕೋಟಿ ರೂ.ಗೆ ತಲುಪಿದೆ. ಎಚ್ ಡಿಎಫ್ ಸಿ ಬ್ಯಾಂಕ್ ಜೊತೆಗೆ ಎಚ್ ಡಿಎಫ್ ಸಿ ವಿಲೀನದಿಂದ ಕ್ರೆಡಿಟ್ -ಠೇವಣಿ (ಡೆಫಾಸಿಟ್ ) ನಡುವಿನ ಅಂತರ ಹೆಚ್ಚಿದೆ. ಗೃಹ ಹಣಕಾಸು ಕಂಪನಿಗಳ ಠೇವಣಿಗಳು ಸಾಲಗಳಿಗಿಂತ ಕಡಿಮೆಯಿರುವ ಕಾರಣ ಕ್ರೆಡಿಟ್-ಡೆಫಾಸಿಟ್ ನಡುವಿನ ಅಂತರ ಹೆಚ್ಚಿರುತ್ತದೆ.
ಬ್ಯಾಂಕ್ ಗಳು 11.9 ಲಕ್ಷ ಕೋಟಿ ರೂ. ಠೇವಣಿಗಳನ್ನು ಸೇರ್ಪಡೆಗೊಳಿಸಿವೆ. ಆದರೆ, ಅವುಗಳ ಸಾಲದ ಮೊತ್ತದಲ್ಲಿ ಕೂಡ ಹೆಚ್ಚಳವಾಗಿದ್ದು, 12.4 ಲಕ್ಷ ಕೋಟಿ ರೂ. ತಲುಪಿದೆ. ಕ್ರೆಡಿಟ್ ಹಾಗೂ ಡೆಫಾಸಿಟ್ ಬೆಳವಣಿಗೆ ನಡುವಿನ ಅಂತರವನ್ನು ಸರ್ಕಾರಿ ಸೆಕ್ಯುರಿಟೀಗಳಲ್ಲಿ ಬ್ಯಾಂಕ್ ಗಳ ಹೆಚ್ಚುವರಿ ಹೂಡಿಕೆಗಳಿಂದ ನಿರ್ವಹಣೆ ಮಾಡಬಹುದಾಗಿದೆ. ಕೇರ್ ಎಡ್ಜ್ ರೇಟಿಂಗ್ಸ್ ಅನ್ವಯ ಪ್ರಸಕ್ತ ಹಣಕಾಸು ಸಾಲಿನಲ್ಲಿ ಎಚ್ ಡಿಎಫ್ ಸಿ ವಿಲೀನದ ಹೊರತಾಗಿಯೂ ಕ್ರೆಡಿಟ್ ಬೆಳವಣಿಗೆ ಶೇ. 13-ಶೇ.13.5 ತಲುಪುವ ನಿರೀಕ್ಷೆಯಿದೆ.
ಠೇವಣಿಗಳ ಬೆಳವಣಿಗೆ ಕ್ರೆಡಿಟ್ ತೆಗೆದುಕೊಳ್ಳುವಿಕೆ ಮೇಲೆ ಯಾವುದೇ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸೋದಾಗಿ ರೇಟಿಂಗ್ ಏಜೆನ್ಸಿ ತಿಳಿಸಿದೆ. ಬ್ಯಾಂಕ್ ಆಫ್ ಬರೋಡಾದ ಮುಖ್ಯ ಆರ್ಥಿಕ ತಜ್ಞ ಮದನ್ ಸಬ್ನಾವಿಸ್ ಪ್ರಕಾರ ಕ್ರೆಡಿಟ್ ಹಾಗೂ ಠೇವಣಿ ಬೆಳವಣಿಗೆ ನಡುವಿನ ವ್ಯತ್ಯಾಸ ಹಣದ ಮಾರುಕಟ್ಟೆಯಲ್ಲಿನ ಲಿಕ್ವಿಡಿಟಿಯಲ್ಲಿ ಪ್ರತಿಫಲಿಸುತ್ತದೆ. ‘ಆರ್ ಬಿಐ ಅಂಕಿಅಂಶಗಳ ಆಧಾರದಲ್ಲಿ ಠೇವಣಿಗಳ ವೆಚ್ಚ ಜುಲೈನಲ್ಲಿ ಏರಿಕೆಯಾಗುವ ನಿರೀಕ್ಷೆಯಿದ್ದು, ಇದರಲ್ಲಿ ಯಾವುದೇ ಅಚ್ಚರಿಯಿಲ್ಲ. ಇದು ಆಗಸ್ಟ್ ನಲ್ಲಿ ಕೂಡ ಮುಂದುವರಿದಿದೆ’ ಎಂದು ಅವರು ತಿಳಿಸಿದ್ದಾರೆ.
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
ಬ್ಯಾಂಕ್ ಗಳ ಟರ್ಮ್ ಡೆಫಾಸಿಟ್ ದರ ಏಪ್ರಿಲ್ ನಲ್ಲಿ ಶೇ.6.28ರಷ್ಟಿದ್ದು, ಜುಲೈನಲ್ಲಿ ಶೇ.6.55ಕ್ಕೆ ಏರಿಕೆಯಾಗಿದೆ. ಕಳೆದ ವಾರ ಪಿಎನ್ ಬಿ ಟರ್ಮ್ ಡೆಫಾಸಿಟ್ ಗಳ ಮೇಲಿನ ಬಡ್ಡಿದರವನ್ನು 25 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿತ್ತು. ಪ್ರಸ್ತುತ ಸಣ್ಣ ಹಣಕಾಸು ಬ್ಯಾಂಕ್ ಗಳು ಅತ್ಯಧಿಕ ಟರ್ಮ್ ಡೆಫಾಸಿಟ್ ದರಗಳನ್ನು ಹೊಂದಿವೆ. 1001 ದಿನಗಳ ಠೇವಣಿಗಳ ಮೇಲೆ ಯುನಿಟಿ ಎಸ್ ಎಫ್ ಬಿ ಶೇ.9ರಷ್ಟು ಬಡ್ಡಿದರ ಹೊಂದಿದೆ. ಭಾರತೀಯ ಖಾಸಗಿ ಬ್ಯಾಂಕ್ ಗಳ ಪೈಕಿ ಡಿಸಿಬಿ 25ರಿಂದ 37 ತಿಂಗಳ ಅವಧಿಯ ಎಫ್ ಡಿ ಮೇಲೆ ಶೇ.7.75 ಬಡ್ಡಿ ನೀಡುತ್ತಿದೆ. ಇನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್ ಠೇವಣಿಗಳ ಮೇಲೆ ಶೇ.7.4ರಷ್ಟು ಬಡ್ಡಿ ನೀಡುತ್ತಿದೆ.