ಹುಬ್ಬಳ್ಳಿ, ಡಿಸೆಂಬರ್ 29 : ‘ನಮ್ಮ ಆಹಾರದ ಬಟ್ಟಲಿನಿಂದ ಗೆಡ್ಡೆ ಗೆಣಸುಗಳು ಮಾಯವಾಗಿವೆ. ಇವುಗಳ ನಿರಂತರ ಬಳಕೆಯಿಂದ ಶರೀರಕ್ಕೆ ರೋಗನಿರೋಧಕ ಶಕ್ತಿ ಬರುತ್ತದೆ. ಆರೋಗ್ಯದ ಜೀವನಕ್ಕೆ ಗೆಡ್ಡೆ ಗೆಣಸುಗಳ ಬಳಕೆ ಪೂರಕ’ ಎಂದು ಆಹಾರ ತಜ್ಞೆ ಮತ್ತು ಬರಹಗಾರ್ತಿ ಮಾಲತಿ ಹೆಗಡೆ ಹೇಳಿದರು.
ಹುಬ್ಬಳ್ಳಿಯ ಮೂರು ಸಾವಿರ ಮಠದ ಡಾ.ಮೂಜಗಂ ಸಭಾಭವನದಲ್ಲಿ ಸಹಜ ಸಮೃದ್ಧ , ಆರೋಗ್ಯಯುತ ಆಹಾರ ಸೇವನೆಗೆ ನಿರ್ಲಕ್ಷಿತ ಬೆಳೆ ಮತ್ತು ಉತ್ಪನ್ನಗಳು ( CROPS4HD) ಮತ್ತು ರೋಟರಿ ಕ್ಲಬ್,ಹುಬ್ಬಳ್ಳಿಯವರ ಆಶ್ರಯದಲ್ಲಿ ನಡೆದ ‘ ಗೆಡ್ಡೆ ಗೆಣಸು ಮೇಳದ ‘ ಭಾಗವಾಗಿ ನಡೆದ ಮಕ್ಕಳ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.
Jasmine: ನಿಮ್ಮ ಮಲ್ಲಿಗೆ ಗಿಡದಲ್ಲಿ ಸಿಕ್ಕಾಪಟ್ಟೆ ಹೂವುಗಳು ಬಿಡಬೇಕಾ..? ಹಾಗಾದ್ರೆ ಹೀಗೆ ಮಾಡಿ ಸಾಕು
‘ಬರಗಾಲದ ಬೆಳೆಗಳು ಎಂದು ಪರಿಗಣಿಸಿದ ಗೆಡ್ಡೆ ಗೆಣಸುಗಳು ಪೋಷಕಾಂಶದ ಖಜಾನೆ. ಇಷ್ಟೊಂದು ಬಗೆಯ ಗೆಡ್ಡೆ ಗೆಣಸು ಇರುವುದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಇಂಥ ಮೇಳಗಳನ್ನು ಆಯೋಜಿಸುವ ಮೂಲಕ, ಗ್ರಾಹಕರಲ್ಲಿ ಮರೆತು ಹೋದ ಆಹಾರಗಳ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿರುವುದು ಶ್ಲಾಘನೀಯ’’ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿಕ್ಲಬ್ ,ಹುಬ್ಬಳ್ಳಿಯ ಅಧ್ಯಕ್ಷರಾದ ಬಾಪುಗೌಡ ಬಿರಾದಾರ ಮಾತನಾಡಿ ‘ ಗೆಡ್ಡೆ ಗೆಣಸುಗಳ ಮಹತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದು ಮಕ್ಕಳಿಗಷ್ಟೇ ಅಲ್ಲದೆ ಅವರ ಪೋಷಕರಿಗೂ ಕೂಡ ಕಲಿಕೆಯಾಗಿದೆ. ಗೆಡ್ಡೆ ಗೆಣಸುಗಳು ನಮ್ಮ ದಿನನಿತ್ಯದ ಅಡುಗೆಯ ಭಾಗವಾಗಬೇಕು’ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೋಟರಿ ಕ್ಲಬ್, ಹುಬ್ಬಳ್ಳಿಯ ಕಾರ್ಯದರ್ಶಿ ಎ.ವಿ.ಸಂಕನೂರ ಮಾತನಾಡಿ ” ಗೆಡ್ಡೆ ಗೆಣಸುಗಳ ಬಗ್ಗೆ ಹುಬ್ಬಳ್ಳಿಯ ಜನತೆಗೆ ಅರಿವು ಮೂಡಿಸಲು ಗೆಡ್ಡೆ ಗೆಣಸು ಮೇಳ ಏರ್ಪಡಿಸಿದ್ದು, ಅದು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಗೆಡ್ಡೆ ಗೆಣಸು ಮತ್ತು ಇತರೆ ನಿರ್ಲಕ್ಷಿತ ಬೆಳೆಗಳನ್ನು ಜನಪ್ರಿಯಗೊಳಿಸಲು ಕಾರ್ಯಕ್ರಮ ರೂಪಿಸಲಾಗುವುದು” ಎಂದರು. ಸಹಜ ಸಮೃದ್ಧದ ಶ್ರೀದೇವಿ, ದೇವಧಾನ್ಯ ರೈತ ಉತ್ಪಾದಕರ ಕಂಪನಿಯ ಸೂರ್ಯಕಾಂತ್ ಶೇಗುಣಸೆ ಮತ್ತು ಮೇಳದ ಆಯೋಜಕ ಪ್ರಕಾಶ್ ಹಿರೇಮಠ್ ಉಪಸ್ಥಿತರಿದ್ದರು. ಈಶ್ವರಪ್ಪ ಅಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು.
ಗೆಡ್ಡೆ ಗೆಣಸು ಚಿತ್ರಕಲಾ ಸ್ಪರ್ಧೆಯ 5-10 ವರ್ಷದ ಮಕ್ಕಳ ವಿಭಾಗದಲ್ಲಿ ಧ್ವನಿ ಕರ್ವಾ( ಪ್ರಥಮ), ಪಿಹು ಕಬಾಡೆ ( ದ್ವಿತೀಯ), ಚಿತ್ರಾಲಿ ಶೆಟ್ ( ತೃತೀಯ) ಮತ್ತು 10-15 ವರ್ಷದ ಮಕ್ಕಳ ವಿಭಾಗದಲ್ಲಿ ಸಾನ್ವಿ ಯಾರಗುಪ್ಪಾ ( ಪ್ರಥಮ), ಅಪೂರ್ವ ಶೇಟ್ ( ದ್ವಿತೀಯ), ಯಶವಂತ ಮುಂಡರಗಿ ( ತೃತೀಯ) ಬಹುಮಾನ ಗಳಿಸಿದರು. ಇದೇ ಸಂದರ್ಭದಲ್ಲಿ ಮಾಲತಿ ಹೆಗಡೆಯವರು ಗೆಡ್ಡೆ ಗೆಣಸಿನ ಖಾದ್ಯಗಳಾದ ನೀಲಿ ಗೆಣಸಿನ ಹಲ್ವಾ, ಕಿತ್ತಳೆ ಗೆಣಸಿನ ಚಿಪ್ಸ್, ಬಿಳಿ ಗೆಣಸಿನ ಬಜ್ಜಿ, ನೀಲಿ ಗೆಣಸಿನ ಬೋಂಡಾ, ಮತ್ತು ನೀಲಿ ಗೆಣಸಿನ ಪಾಯಸದ ಅಡುಗೆಗಳನ್ನು ಮಾಡಿ ತೋರಿಸಿದರು.