ಇತ್ತೀಚೆಗೆ ಪ್ರೇಕ್ಷಕರ ಮನಸ್ಥತಿ ಬದಲಾಗಿದೆ. ದುಡ್ಡಿದ್ದರಷ್ಟೇ ಸಿನಿಮಾ ಗೆಲ್ಲುವುದು ಎಂಬುದನ್ನು ಹಲವಾರ ಸಣ್ಣ ಸಣ್ಣ ಬಜೆಟ್ ಸಿನಿಮಾಗಳು ತಳ್ಳಿ ಹಾಕಿವೆ. ನೂರಾರು ಕೋಟಿ ಬಜೆಟ್ ನಲ್ಲಿ ರೆಡಿಯಾದ ಸಿನಿಮಾಗಳು ಹೇಳ ಹೆಸರಿಲ್ಲದೆ ಥಿಯೇಟರ್ ನಲ್ಲಿ ಮಕಾಡೆ ಮಲಗ್ತಿದ್ರೆ ಕೆಲವೇ ಕೆಲವು ಕೋಟಿಗಳಲ್ಲಿ ರೆಡಿಯಾದ ಸಿನಿಮಾಗಳು ನೂರಾರು ಕೋಟಿ ಕಲೆಕ್ಷನ್ ಮಾಡುತ್ತಿವೆ. ಅವುಗಳಲ್ಲಿ ಸದ್ಯ ಮಹಾರಾಜ ಸಿನಿಮಾ ಕೂಡ ಒಂದು. ವಿಜಯ್ ಸೇತುಪತಿ ನಟನೆಯ ‘ಮಹಾರಾಜ’ ಸಿನಿಮಾ ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾವನ್ನೇ ಮೀರಿಸಿ ಕಲೆಕ್ಷನ್ ನಲ್ಲಿ ಕಮಾಲ್ ಮಾಡ್ತಿದೆ.
ಭಾರತದಲ್ಲಿ ಅತಿಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ‘ದಂಗಲ್’ ಎರಡನೇ ಸ್ಥಾನದಲ್ಲಿ ‘ಬಾಹುಬಲಿ 2’ ಸಿನಿಮಾಗಳಿವೆ. ಈ ಸಿನಿಮಾಗಳು ಬಿಡುಗಡೆ ಆಗಿ ವರ್ಷಗಳಾಗಿದ್ದರೂ ಸಹ ಈಗಲೂ ಈ ಸಿನಿಮಾದ ದಾಖಲೆಯನ್ನು ಯಾವ ಸಿನಿಮಾಗಳಿಗೂ ಮುರಿಯಲು ಸಾಧ್ಯವಾಗಿಲ್ಲ. ಆದರೆ ಇದೀಗ ತೀರ ಸಣ್ಣ ಬಜೆಟ್ನ ಸಿನಿಮಾವಾಗಿರುವ ‘ಮಹಾರಾಜ’ ‘ಬಾಹುಬಲಿ’ ಸಿನಿಮಾದ ದಾಖಲೆ ಮುರಿದಿದೆ.
ಕೇವಲ 20 ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿರುವ ತಮಿಳಿನ ‘ಮಹಾರಾಜ’ ಸಿನಿಮಾ ಇದೀಗ ‘ಬಾಹುಬಲಿ’ ಸಿನಿಮಾದ ದಾಖಲೆಯನ್ನೇ ಮುರಿದು ಹಾಕಿದೆ. ಹಾಗೆಂದು ಈ ಸಿನಿಮಾ ‘ಬಾಹುಬಲಿ 2’ ಸಿನಿಮಾದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆ ಮುರಿದಿಲ್ಲ. ಬದಲಿಗೆ ವಿದೇಶದಲ್ಲಿ ವಿಶೇಷವಾಗಿ ಒಂದು ನಿಗದಿತ ದೇಶದಲ್ಲಿ ‘ಬಾಹುಬಲಿ 2’ ಸಿನಿಮಾದ ಕಲೆಕ್ಷನ್ ಅನ್ನು ಮೀರಿಸಿದೆ.
‘ಮಹಾರಾಜ’ ಸಿನಿಮಾ ಇದೇ ವರ್ಷ ಜೂನ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ತನ್ನ ಅತ್ಯುತ್ತಮ ಕತೆ, ನಿರೂಪಣಾ ವಿಧಾನ ಮತ್ತು ನಟರ ಅಭಿನಯದಿಂದ ಸೆಳೆದಿತ್ತು. ಭಾರತದಲ್ಲಿ ಈ ಸಿನಿಮಾ 180 ಕೋಟಿಗೂ ಹೆಚ್ಚು ಹಣ ಆಗಲೇ ಗಳಿಸಿತ್ತು. ಈ ಸಿನಿಮಾ ಕೆಲ ದಿನಗಳ ಹಿಂದೆಯಷ್ಟೆ ಚೀನಾದಲ್ಲಿ ಬಿಡುಗಡೆ ಆಗಿದ್ದು, ಅಲ್ಲಿಯೂ ಸಹ ಅದ್ಭುತ ಪ್ರದರ್ಶನ ಕಾಣುತ್ತಿದೆ. ಚೀನಾದಲ್ಲಿ ಪ್ರೇಕ್ಷಕರಿಗೆ ‘ಮಹಾರಾಜ’ ಸಿನಿಮಾ ಬಹಳ ಇಷ್ಟವಾಗಿದ್ದು ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಚೀನಾ ಬಾಕ್ಸ್ ಆಫೀಸ್ನಲ್ಲಿ ‘ಮಹಾರಾಜ’ ಸಿನಿಮಾ ಕೆಲವೇ ದಿನಗಳಲ್ಲಿ 76.50 ಕೋಟಿ ರೂಪಾಯಿ ಹಣ ಗಳಿಸಿದೆ. ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಸಿನಿಮಾ ಚೀನಾ ಮಾರುಕಟ್ಟೆಯಲ್ಲಿ 64 ಕೋಟಿ ರೂಪಾಯಿ ಹಣ ಗಳಿಸಿತ್ತು. ಇದೀಗ ‘ಬಾಹುಬಲಿ 2’ ಸಿನಿಮಾದ ದಾಖಲೆ ಮುರಿದಿರುವ ‘ಮಹಾರಾಜ’ ಸಿನಿಮಾ ಚೀನಾ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಹಣ ಗಳಿಸುವ ಭರವಸೆ ಮೂಡಿಸಿದೆ. ಮಾತ್ರವಲ್ಲದೆ ‘ದಂಗಲ್’ ಸಿನಿಮಾದ ದಾಖಲೆಯನ್ನು ಸಹ ಮುರಿಯುವ ಸುಳಿವು ನೀಡಿದೆ.
‘ಮಹಾರಾಜ’ ಸಿನಿಮಾದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೇವಲ 20 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾದ ಈ ಸಿನಿಮಾ ಈಗಾಗಲೇ 250 ಕೋಟಿಗೂ ಹೆಚ್ಚು ಹಣ ಗಳಿಸಿದ್ದು ಇಂದಿಗೂ ಬಾಕ್ಸ್ ಆಫೀಸ್ ನಲ್ಲಿ ಮಹಾರಾಜನ ದರ್ಬರ್ ಮುಂದುವರೆದಿದೆ.