ಭಾಗ್ಯಲಕ್ಷ್ಮೀ’ ಧಾರಾವಾಹಿಯನ್ನ.. ಅದರಲ್ಲೂ ಭಾಗ್ಯ ಪಾತ್ರಧಾರಿಯ ಬದುಕನ್ನ ಕೆಲ ವೀಕ್ಷಕರು ತೀರಾ ಸೀರಿಯಸ್ ಆಗಿ ಪರಿಗಣಿಸಿದ್ದಾರೆ. ಅದನ್ನ ಜಸ್ಟ್ ಸೀರಿಯಲ್ನಂತೆ ನೋಡದೆ.. ಕಥೆಯಲ್ಲಿ ಬರುವ ತಿರುವುಗಳ ಬಗ್ಗೆ ಸರಿ – ತಪ್ಪು ಲೆಕ್ಕಾಚಾರದಲ್ಲಿ ವೀಕ್ಷಕರು ಮುಳುಗಿದ್ದಾರೆ.
ಪತಿ ತಾಂಡವ್ನ ಭಾಗ್ಯ ತೊರೆದಿದ್ದಾಳೆ. ತಾಂಡವ್ ಬೇಡ, ಆತ ಕಟ್ಟಿರುವ ತಾಳಿಯೂ ಬೇಡ ಅಂತ ದೂರ ತಳ್ಳಿ ಬಂದಿದ್ದಾಳೆ ಭಾಗ್ಯ. ಇತ್ತ ತಮ್ಮ ಪಾಲಿಗೆ ಮಗ ಸತ್ತುಹೋಗಿದ್ದಾನೆ ಅಂತ ಕುಸುಮಾ, ಧರ್ಮರಾಜ್ ತಲೆ ಮೇಲೆ ನೀರು ಸುರಿದುಕೊಂಡಿದ್ದಾರೆ. ಇಷ್ಟಾದರೂ, ಭಾಗ್ಯ ಜೀವನಕ್ಕೆ ತಾಂಡವ್ ಕಡೆಯಿಂದ ತೊಂದರೆ ಮಾತ್ರ ತಪ್ಪುತ್ತಿಲ್ಲ.
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಮನೆ ಉಳಿಸಲು ಇನ್ನಿಲ್ಲದ ಯತ್ನ ನಡೆಸಿದ್ದಾಳೆ. ಕೊನೆಗೆ ಯಾವುದೇ ದಾರಿ ಕಾಣದೇ, ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ಪ್ರಾರ್ಥಿಸಿದ್ದಾಳೆ. ಆಗ ದೇವರು ಅವಳಿಗೆ ಒಂದು ದಾರಿ ತೋರಿಸಿದ್ದಾರೆ.
ಮನೆಯಿಂದ ಹೊರಟ ಭಾಗ್ಯ, ಸಾಲದ ತಿಂಗಳ ಕಂತು ಕಟ್ಟಲು ಹಣ ಹೊಂದಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾಳೆ. ಆದರೆ ಅವಳಿಗೆ ಯಾವುದೇ ದಾರಿ ಕಾಣಿಸಿಲ್ಲ. ಕೊನೆಗೆ ದೇವರ ಮೊರೆ ಹೋಗಿದ್ದಾಳೆ. ದೇವರಲ್ಲಿ ಬೇಡಿಕೊಳ್ಳುತ್ತಾ, ಈ ಕಷ್ಟವನ್ನು ನಿವಾರಿಸಲು ನೀನೇ ದಾರಿ ತೋರಿಸಬೇಕು, ನಾನು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಿದೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳುತ್ತಾಳೆ. ದೇವರು ಆಗ ಹೂವೊಂದನ್ನು ಉದುರಿಸಿ, ಹೆದರಬೇಡ, ನಿನ್ನ ಜೊತೆ ನಾನಿದ್ದೇನೆ ಎಂಬ ಸಂದೇಶ ಕೊಡುತ್ತಾರೆ
ದೇವಸ್ಥಾನದಿಂದ ಹೊರಗೆ ಬರುತ್ತಲೇ, ಹಿರಿಯರೊಬ್ಬರು ಅಲ್ಲಿ ಅಡುಗೆಯ ಕಾಂಟ್ರಾಕ್ಟರ್ ಒಬ್ಬನನ್ನು ಬೈಯುತ್ತಾ ಇರುತ್ತಾರೆ. ಅಡುಗೆ ಮಾಡಿಕೊಡುವೆ ಎಂದು ಹೇಳಿ, ಈಗ ಮೋಸ ಮಾಡಿದೆ, ಹೀಗೆ ನೀನು ಕೈಕೊಟ್ಟರೆ, ಕೊನೆಗಳಿಗೆಯಲ್ಲಿ ನಾನೇನು ಮಾಡಲಿ, 250 ಜನರಿಗೆ ಇಷ್ಟು ಕಡಿಮೆ ಸಮಯದಲ್ಲಿ ಊಟ ಎಲ್ಲಿಂದ ತರಲಿ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಅವರ ಕಷ್ಟ ಕೇಳಿಸಿಕೊಂಡ ಭಾಗ್ಯ, ಅಲ್ಲಿಗೆ ತೆರಳಿ, ನಾನು ಅಡುಗೆ ಮಾಡುತ್ತೇನೆ, ಚೆನ್ನಾಗಿಯೇ ಮಾಡಿ ಕೊಡುತ್ತೇನೆ ಎಂದು ಹೇಳುತ್ತಾಳೆ. ಆದರೆ ಹಿರಿಯರು ಅವಳ ಮಾತು ನಂಬುವುದಿಲ್ಲ.
ಆಗ ದೇವಸ್ಥಾನದ ಪುರೋಹಿತರು, ಭಾಗ್ಯಳ ಅಡುಗೆಯಲ್ಲಿ ನಂಬಿಕೆ ಇರಲಿ, ಅದಕ್ಕೆ ನಾನು ಖಾತ್ರಿ ಕೊಡುತ್ತೇನೆ, ಅವಳು ತುಂಬಾ ಚೆನ್ನಾಗಿ ಅಡುಗೆ ಮಾಡಿಕೊಡುತ್ತಾಳೆ ಎಂದು ಹೇಳುತ್ತಾರೆ. ಅದಕ್ಕೆ ಒಪ್ಪಿದ ಹಿರಿಯರು, ನಾನು ನಿಮ್ಮ ಮಾತು ನಂಬಿ, ಭಾಗ್ಯಗೆ ಅಡುಗೆ ಕೆಲಸ ಕೊಡುತ್ತೇನೆ, ಚೆನ್ನಾಗಿ ಮಾಡಿಕೊಟ್ಟು, ನನ್ನ ಮರ್ಯಾದೆ ಉಳಿಸು ಎಂದು ಕೇಳಿಕೊಳ್ಳುತ್ತಾರೆ. ಭಾಗ್ಯ ಕೂಡಲೇ ಮನೆಗೆ ಫೋನ್ ಮಾಡಿ, ಅತ್ತೆಯನ್ನು ಕರೆಸಿಕೊಳ್ಳುತ್ತಾಳೆ.
ಮನೆಯ ಸಾಲದ ಕಂತು ಕಟ್ಟಲು ಹೊಸ ದಾರಿಯೊಂದು ಭಾಗ್ಯಳ ಎದುರು ತೆರೆದುಕೊಂಡಿದೆ. ಭಾಗ್ಯ ಮುಂದೇನು ಮಾಡುತ್ತಾಳೆ ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.