ದೊಡ್ಡಬಳ್ಳಾಪುರ: ಗಣಿತ, ಭೌತವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಪ್ರಯೋಗಗಳಿಗೆ ವಿಜ್ಞಾನ ಮೇಳವು ವೇದಿಕೆಯಾಯಿತು. ತಾಲೂಕಿನ ವಿವಿಧ ಶಾಲೆಯಿಂದ 1500ಕ್ಕೂ ಅಧಿಕ ವಿದ್ಯಾರ್ಥಿಗಳು ವಿಜ್ಞಾನದ ಮಾದರಿಗಳು, ಪ್ರಯೋಗಗಳಲ್ಲಿ ತೊಡಗುವ ಮೂಲಕ ವೈಜ್ಞಾನಿಕ ಕ್ಷೇತ್ರದಲ್ಲಿನ ಬೆಳವಣಿಗೆಗಳ ಬಗ್ಗೆ ಕುತೂಹಲದಿಂದ ತಿಳಿದುಕೊಳ್ಳಲು ವಿಜ್ಞಾನ ಮತ್ತು ಗಣಿತ ಮೇಳವನ್ನ ಆಯೋಜನೆ ಮಾಡಲಾಗಿದೆ ಎಂದು ನವೋದಯ ವಿದ್ಯಾನಿಕೇತನ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ವೀರೆಗೌಡ ಹೇಳಿದರು.
ತಾಲೂಕಿನ ಕೊನಘಟ್ಟ ಸಮೀಪವಿರುವ ನವೋದಯ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಗಣಿತ ಹಾಗೂ ವಿಜ್ಞಾನ ಮೇಳವನ್ನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಸ್ವಂತ ಅನುಭವಗಳಿಂದ ಕಲಿಯಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಈ ಮೇಳ ಆಯೋಜಿಸಲಾಗಿದೆ ಎಂದರು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಜಾಗೃತಗೊಳಿಸುವುದು, ಪ್ರಾಯೋಗಿಕ ಕಲಿಕೆ, ಉನ್ನತ ಶಿಕ್ಷಣ ಹಾಗೂ ಸಾಧನೆಗಳತ್ತ ಪ್ರೇರಣೆ ನೀಡುವುದು ಮೇಳದ ಉದ್ದೇಶವಾಗಿತ್ತು. ನಮ್ಮ ಈ ಎಲ್ಲ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು. ಶಾಲೆಯ ಆಡಳಿತ ಉಸ್ತುವಾರಿಯಾದ ಮುರಳಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ಮಾಡಿದರೆ, ಅವರಿಗೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ.
ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇವೆ. ಪ್ರತಿ ವರ್ಷವೂ ಈ ರೀತಿಯ ಮೇಳ ಆಯೋಜಿಸುವ ಉದ್ದೇಶವಿದೆ. ಮೇಳವು ವಿಜ್ಞಾನ ವಿಷಯದ ಪ್ರಾಯೋಗಿಕ ಕಲಿಕೆಯ ಜೊತೆಗೆ ಸಾಮಾನ್ಯ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಯಿತು. ರಸಪ್ರಶ್ನೆ ಸ್ಪರ್ಧೆಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಉತ್ತೇಜನ ನೀಡಲಾಯಿತು ಎಂದರು. ಈ ವೇಳೆ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಭವ್ಯ, ಉಪನ್ಯಾಸಕರಾದ ಮಹೇಶ್ ಸೇರಿದಂತೆ ಶಾಲೆಯ ಶಿಕ್ಷಕರು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.