ಹುಬ್ಬಳ್ಳಿ : ಮುಡಾ ಪ್ರಕರಣದ ಲೋಕಾಯುಕ್ತ ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಗುತ್ತದೆ ಎಂದು ಮೊದಲೇ ಗೊತ್ತಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತದಲ್ಲಿ ಅಧಿಕಾರಿಗಳನ್ನ ಪೋಸ್ಟಿಂಗ್ ಮಾಡುವುದು ಸಿಎಂ ಕೈಯಲ್ಲೇ ಇರುತ್ತದೆ. ಇದನ್ನ ಲೋಕಾಯುಕ್ತ ಪೊಲೀಸರಿಂದ ತನಿಖೆ ಮಾಡಿದ್ರೆ ಇದನ್ನ ಮುಚ್ಚಿ ಹಾಕ್ತಾರೆ ಅಂತ ಆವತ್ತೇ ಹೇಳಿದ್ದೆ, ಇಂದು ಅದೇ ಪರಿಸ್ಥಿತಿ ಆಗಿದೆ ಎಂದರು.
ರಾತ್ರೋ ರಾತ್ರಿ ಅಧಿಕಾರಿಗಳನ್ನ ಯಾರೆಲ್ಲ ಭೇಟಿಯಾಗಿ ಬಂದಿದ್ದಾರೆ ಅನ್ನೋದು ಎಲ್ಲವೂ ಗೊತ್ತಿದೆ. ಇದೇನೂ ಆಶ್ಚರ್ಯಕರ ಸಂಗತಿ ಏನೂ ಅಲ್ಲ. ನಿಷ್ಪಕ್ಷಪಾತ ತನಿಖೆಯಾಗಬೇಕಾದ್ರೆ ನೇರವಾಗಿ ಸಿಬಿಐ ತನುಖೆ ಮಾಡಿಸಬೇಕು. ಆವಾಗ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದರು.
ಇನ್ನೂ ಪಡಿತರ ಅಕ್ಕಿ ವಿಚಾರವಾಗಿ ರಾಜ್ಯ ಸರ್ಕಾರದವರಿಗೆ ಈಗ ಜ್ಞಾನೋದಯವಾಗಿದೆ. ನಾವು ಅಕ್ಕಿ ಕೊಡುತ್ತೇವೆ ಅಂದಾಗ ಇವ್ರು ತಗೋಳೋಕೆ ಮುಂದೆ ಬರಲಿಲ್ಲ. ಈಗ ಈ ಬಗ್ಗೆ ಚರ್ಚೆ ಗಂಭೀರವಾದಾಗ ಸಿಎಂ ಅವರಿಗೆ ಬುದ್ದಿ ಬಂದಿದೆ. ಇದೀಗ ಅನಿವಾರ್ಯವಾಗಿ ಅಕ್ಕಿ ಖರೀದಿಗೆ ಮುಂದಾಗಿದ್ದಾರೆ