ಚಿತ್ರದುರ್ಗ : ರಾಜ್ಯದಲ್ಲಿ ಏಳು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಜಿಲ್ಲೆಯ ಹೊಸದುರ್ಗ ಪಟ್ಟಣದ ಮನೆ ಸೇರಿ ಹಲವು ಕಡೆ ಲೋಕಾಯುಕ್ತ ರೇಡ್ ನಡೆದಿದೆ. ಚಿತ್ರದುರ್ಗ ಬಿಸಿಎಂ ಇಲಾಖೆ ಮ್ಯಾನೇಜರ್ ಕೆ.ಸಿ. ಶಶಿಧರ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಹೊಸದುರ್ಗ ಪಟ್ಟಣದ ವಿದ್ಯಾನಗರ ನಿವಾಸ, ಹೊಳಲ್ಕೆರೆ ತಾಲ್ಲೂಕಿನ ಕಡ್ಲಪ್ಪನಹಟ್ಟಿ ತೋಟದ ಮನೆ, ಚಿತ್ರದುರ್ಗ ಬಿಸಿಎಂ ಕಚೇರಿ, ಸೇರಿ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ SP ವಾಸುದೇವ್ ರಾವ್, DYSP ಮೃತ್ಯುಂಜಯ ನೇತೃತ್ವದ ತಂಡ ದಾಳಿ ನಡೆಸಿದೆ.
ಬಾಗಲಕೋಟೆಯಲ್ಲೂ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಗ್ರಾಮ ಪಂಚಾಯ್ತಿ ಪಿಡಿಓ ಎಸ್ ಪಿ ಹಿರೆಮಠ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್ ಪಿ ಸಿದ್ದೇಶ್ ಅವರ ನೇತೃತ್ವದಲ್ಲಿ ನರಗುಂದದ ಮನೆ ಸೇರಿದಂತೆ ಏಕಕಾಲದಲ್ಲಿ ಮೂರು ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.