ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಲೋಕಸಭಾ ಚುನಾವಣೆಯು ದೇಶದಲ್ಲಿ 7 ಹಂತಗಳಲ್ಲಿ ನಡೆಯಲಿದೆ. ರಾಜ್ಯದಲ್ಲಿ ದೇಶದ 2ನೇ ಹಾಗೂ 3ನೇ ಹಂತದಲ್ಲಿ ಇಲ್ಲಿನ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು ರಾಜ್ಯದಲ್ಲಿ ನಡೆಯುವ ಹಂತದನ್ವಯ ಎರಡನೇ ಹಂತದಲ್ಲಿ ದಾವಣಗೆರೆ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಮಾಹಿತಿ ನೀಡಿದರು.
ದಾವಣಗೆರೆ ಜಿಲ್ಲಾಧಿಕಾರಿ ವೆಂಕಟೇಶ್ ಎಂ ವಿ, ಏಪ್ರಿಲ್ 12 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು ಏ.19 ರ ವರೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಏ.20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಏ.22 ಕೊನೆಯ ದಿನವಾಗಿರುತ್ತದೆ. ಮತದಾನವು ಮೇ 7 ರಂದು ನಡೆಯಲಿದೆ.
ಮತ ಎಣಿಕೆಯು ಜೂನ್ 4 ರಂದು ದಾವಣಗೆರೆ ವಿ.ವಿ. ಆವರಣದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯದ ಸಭಾಂಗಣವನ್ನು ಚುನಾವಣಾಧಿಕಾರಿಗಳ ಕಚೇರಿಯನ್ನಾಗಿ ಮಾಡಲಾಗಿದ್ದು ಇಲ್ಲಿಯೇ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ನಾಮಪತ್ರ ಸಲ್ಲಿಕೆ ವೇಳೆ ಸಾಮಾನ್ಯ ಅಭ್ಯರ್ಥಿಯಾಗಿದ್ದಲ್ಲಿ ರೂ.25 ಸಾವಿರ ಹಾಗೂ ಪ.ಜಾ, ಪ.ಪಂಗಡ ಅಭ್ಯರ್ಥಿಯಾಗಿದ್ದಲ್ಲಿ ರೂ.12500 ಠೇವಣಿ ಸಲ್ಲಿಸಬೇಕು, ಚುನಾವಣಾ ವೆಚ್ಚದ ಮಿತಿ ಪ್ರತಿ ಅಭ್ಯರ್ಥಿಗೆ ರೂ.95 ಲಕ್ಷ ಮಿತಿ ಇದೆ.
ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿವೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1946 ಮತಗಟ್ಟೆಗಳು ಬರುತ್ತವೆ. ಇದರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 1693 ಮತಗಟ್ಟೆಗಳಿವೆ.
ಕ್ಷೇತ್ರವ್ಯಾಪ್ತಿಯಲ್ಲಿ ಹರಪನಹಳ್ಳಿ ಸೇರಿದಂತೆ ಪುರುಷ 838705, ಮಹಿಳಾ 840340, ಇತರೆ 136 ಹಾಗೂ 565 ಸೇವಾ ಮತದಾರರು ಸೇರಿ 16,79,746 ಮತದಾರರಿದ್ದಾರೆ. ವಿಧಾನಸಭಾ ಚುನಾವಣಾ ನಂತರ 2024 ರ ಜನವರಿ 1 ಕ್ಕೆ 18 ವರ್ಷ ತುಂಬುವವ ಯುವ ಮತದಾರರನ್ನು ಸೇರ್ಪಡೆ ಮಾಡಲಾಗಿದ್ದು 19507 ಪುರುಷ, 17339 ಮಹಿಳಾ, 3 ಇತರೆ ಸೇರಿ 36849 ಹೊಸ ಯುವ ಮತದಾರರು ಪಟ್ಟಿಯಲ್ಲಿ ನೊಂದಾಯಿಸಿದ್ದಾರೆ. ಏಪ್ರಿಲ್ 9 ರ ವರೆಗೂ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶ ಇದ್ದು ಆನ್ಲೈನ್ ಮೂಲಕ, ಅಥವಾ ಬಿ.ಎಲ್.ಓ ಮೂಲಕ ನೊಂದಾಯಿಸಿ ಯುವ ಮತದಾರರಾಗಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದರು.
ಮಾದರಿ ನೀತಿ ಸಂಹಿತೆ ಜಾರಿಗೆ ತಂಡಗಳನ್ನು ರಚಿಸಲಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಹಾಯಕ ಚುನಾವಾಣಾಧಿಕಾರಿಗಳ ನೇಮಕ ಮಾಡಲಾಗಿದೆ. ಮತ್ತು ಜಿಲ್ಲೆಯ ಗಡಿಭಾಗದಲ್ಲಿ 20 ಚೆಕ್ಪೋಸ್ಟ್, ಜಿಲ್ಲೆಯೊಳಗೆ 15 ಚೆಕ್ಪೋಸ್ಟ್ಗಳನ್ನು ಸ್ಥಾಪನೆ ಮಾಡಲಾಗಿದೆ. ಮತ್ತು ಪೊಲೀಸ್ ಅಧಿಕಾರಿಗಳನ್ನೊಳಗೊಂಡು 25 ಪ್ಲೈಯಿಂಗ್ ಸ್ಕ್ವಾಡ್ ನೇಮಕ ಮಾಡಲಾಗಿದೆ. ವೀಡಿಯೋ ಸರ್ವಲೆನ್ಸ್ ಟೀಮ್, ಸಿಸಿ ಟಿವಿ ಅಳವಡಿಕೆ ಮಾಡಲಿದ್ದು ಈ ತಂಡಗಳು ದಿನದ 24 ಗಂಟೆಯು ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಜಾಗೃತಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಅದೇ ರೀತಿ ಈ ವರ್ಷವೂ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಎಲ್ಲಾ ಮತದಾರರು ಮತದಾನ ಮಾಡಲು ಪ್ರೇರೇಪಣೆ ನೀಡಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ವಿಶೇಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಸಖಿ, ವಿಶೇಷಚೇತನರು, ಯುವ ಮತದಾರರು, ಸಂಪ್ರದಾಯ, ಧ್ಯೇಯ ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತದೆ. 85 ವರ್ಷ ಮೇಲ್ಟಟ್ಟ 11258, ವಿಶೇಷಚೇತನ 20351 ಮತದಾರರು ಹಾಗೂ 180 ಜನರು ನೂರು ವರ್ಷಕ್ಕಿಂತಲೂ ಹೆಚ್ಚಿನ ಮತದಾರರಿದ್ದಾರೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಉಮಾಪ್ರಶಾಂತ್ ಮಾತನಾಡಿ ಮುಕ್ತ, ನ್ಯಾಯಸಮ್ಮತ, ಶಾಂತಯುತ ಚುನಾವಣೆ ನಡೆಸಲು ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೌಢಿ ಶೀಟರ್ ಗಳ ಬಾಂಡಿಂಗ್ ಓವರ್, ಸಮಾಜದಲ್ಲಿ ಶಾಂತಿ ಕದಡುವವರ ಪಟ್ಟಿ ಮಾಡಿ ಅವರ ಮೇಲೆ ನಿಗಾವಹಿಸಲಾಗುತ್ತಿದೆ. ಮೊಬೈಲ್ ತಂಡ, ಚೆಕ್ ಪೋಸ್ಟ್ ಗಳ ಮೂಲಕ ತೀವ್ರ ಕಟ್ಟೆಚ್ಚರ ವಹಿಸುವ ಮೂಲಕ ನ್ಯಾಯಸಮ್ಮತ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.