ಹುಬ್ಬಳ್ಳಿ: ‘ಪ್ರಸ್ತುತ ದಿನಗಳಲ್ಲಿ ಮಾನಸಿಕ ಒತ್ತಡ, ಖಿನ್ನತೆಯಿಂದ ಬಳಲುವವರ ಸಂಖ್ಯೆ, ಆತ್ಮಹತ್ಯೆ ಪ್ರಕರಣಗಳು ಹೆಚ್ಚು
ತ್ತಿವೆ. ಸಂಗೀತ ಆಲಿಸುವುದರಿಂದ ಒತ್ತಡ ನಿವಾರಣೆಯಾಗುತ್ತದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಅರ್ಜುನಸಾ ನಾಕೋಡ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕ್ಷಮತಾ ಸೇವಾ ಸಂಸ್ಥೆ ಹಾಗೂ ಸ್ವರ್ಣ ಗ್ರೂಪ್ ಆಫ್ ಕಂಪನಿ ವತಿಯಿಂದ ಏರ್ಪಡಿಸಿದ್ದ ಅರ್ಜುನಸಾ ನಾಕೋಡ ಸಂಗೀತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹುಬ್ಬಳ್ಳಿ–ಧಾರವಾಡ ಅನೇಕ ಸಂಗೀತ ದಿಗ್ಗಜರನ್ನು ನಾಡಿಗೆ ನೀಡಿದೆ. ಅರ್ಜುನಸಾ ನಾಕೋಡ ಅವರು ಹಲವು ಶಿಷ್ಯರನ್ನು ತಯಾರು ಮಾಡಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ’ ಎಂದರು.
‘ಅರ್ಜುನಸಾ ನಾಕೋಡ ಅವರು ಪೈಲ್ವಾನ್, ನಾಟಕಕಾರರೂ ಆಗಿದ್ದರೂ. ಹರಿಕತೆ ಹೇಳುತ್ತಿದ್ದರು. ಅವರದ್ದು ಬಹುಮುಖಿ ವ್ಯಕ್ತಿತ್ವ. ಗ್ವಾಲಿಯರ್ ಘರಾಣಾದಲ್ಲೂ ಅವರು ಖ್ಯಾತಿ ಗಳಿಸಿದ್ದರು’ ಎಂದು ಹೇಳಿದರು.
‘ಭಾರತೀಯ ಸಂಗೀತಕ್ಕೆ ವಿಶಿಷ್ಟ ಶಕ್ತಿ ಇದೆ. ಸಂಗೀತ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಪ್ರತಿಭೆಗಳು ಬರುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.
ಬಾಲಚಂದ್ರ ನಾಕೋಡ ಮಾತನಾಡಿ, ‘ಅರ್ಜುನಸಾ ನಾಕೋಡ ಅವರ ಹೆಸರಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸುವ ಮೂಲಕ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಉಳಿಸಿ, ಬೆಳೆಸುವ ಕೆಲಸವಾಗುತ್ತಿದೆ’ ಎಂದು ಹೇಳಿದರು.