ಹುಬ್ಬಳ್ಳಿ: ಬಿಜೆಪಿ ಆಡಳಿತ ಸಂದರ್ಭ ದಲ್ಲಿ ಎಷ್ಟು ಬಾರಿ , ಎಷ್ಟು ಪ್ರತಿ ಶತ ಬಸ್ ದರವನ್ನು ಹೆಚ್ಚಿಸಿದ್ದೀರಿ ಎಂಬುದನ್ನು ನೆನಪು ಮಾಡಿಕೊಂಡು ನಂತರ ಬಿಜೆಪಿ ಹೋರಾಟ ಮಾಡಲಿ ಎಂದು ಸ್ಲಂ ಬೋರ್ಡ್ ಅಧ್ಯಕ್ಷರು, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.
ಅವರು ಪತ್ರಿಕಾ ಪ್ರಕಟಣೆ ನೀಡಿ ಬಿಜೆಪಿ ಅವಧಿಯಲ್ಲಿ ಸಾರಿಗೆ ನಿಗಮಗಳಿಗೆ ಬಿಟ್ಟು ಹೋಗಿದ್ದ ₹5,900 ಕೋಟಿ ಸಾಲದ ಹೊರೆ ನಾವು ತೀರಿಸುತಿದ್ದೇವೆ . ಕೇವಲ 15 % ಹೆಚ್ಚು ಮಾಡಿದ್ದಕ್ಕೆ ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ನೀವು ಮಾಡಿದ ಸಾಲದ ಹೊರೆ ತೀರಿಸಲು ಬಸ್ ಪ್ರಯಾಣ ದರ ಹೆಚ್ಚಳದ ನಿರ್ಧಾರ ತೆಗೆದುಕೊಂಡಿದ್ದೇವೆ’ ಹೊರತು, ಗ್ಯಾರಂಟಿ ಹಣ ಹೊಂದಿಸಲು ಅಲ್ಲ ಎಂದು ಬಿಜೆಪಿಗೆ ತಿವಿದಿದ್ದಾರೆ.
2008ರಿಂದ 2013ರ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಅಂದು ಸಾರಿಗೆ ಸಚಿವರಾಗಿದ್ದ ಆರ್. ಅಶೋಕ ಅವರ ಅವಧಿಯಲ್ಲೇ ಏಳು ಬಾರಿ ಪ್ರಯಾಣದರ ಹೆಚ್ಚಳ ಮಾಡಿದ್ದಾರೆ. ಆಗ ಒಟ್ಟು ಶೇ 47.8ರಷ್ಟು ಏರಿಕೆ ಮಾಡಲಾಗಿತ್ತು ಎಂದು ಹೇಳಿದರು.
ಶಕ್ತಿ ಯೋಜನೆಯ ಹೊರೆ ಕಡಿಮೆ ಮಾಡಿಕೊಳ್ಳಲು ದರ ಹೆಚ್ಚಳ ಮಾಡಲಾಗಿದೆ ಎಂದು ಬಿಜೆಪಿ ಮುಖಂಡರು ಅಪಪ್ರಚಾರ ನಡೆಸುತ್ತಿ ದ್ದಾರೆ. ಬಿಜೆಪಿಯರಿಗೆ ಮಹಿಳಾ ಸಬಲೀಕರಣ ಇಷ್ಟವಿಲ್ಲ. ಹಾಗಾಗಿ, ಶಕ್ತಿ ಯೋಜನೆ ವಿರೋಧಿಸುತ್ತಿದ್ದಾರೆ ಎಂದು ದೂರಿದರು.
ಬಿ.ಎಸ್. ಯಡಿಯೂರಪ್ಪ 2020ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಶೇ 12ರಷ್ಟು ಹೆಚ್ಚಳ ಮಾಡಿದ್ದರು. 2023ರಲ್ಲಿ ಬಿಜೆಪಿ ಸರ್ಕಾರದ ಅವಧಿ ಮುಗಿದಾಗ ₹5,900 ಕೋಟಿ ಹೊರೆ ಉಳಿಸಿದ್ದರು. ಬಿಜೆಪಿ ಆಡಳಿತ ಹೇಗಿತ್ತು ಎಂದರೆ ಅವರ ಅವಧಿಯಲ್ಲಿ ಬೇಡಿಕೆಗಾಗಿ ಹೋರಾಟ ನಡೆಸಿದ್ದ 3 ಸಾವಿರ ನೌಕರರನ್ನು ವಜಾ ಮಾಡಿತ್ತು. 15 ಸಾವಿರ ನೌಕರರ ವಿರುದ್ಧ ಕ್ರಮ ಕೈಗೊಂಡಿತ್ತು ಎಂದರು.
ವೇತನ ಪರಿಷ್ಕರಣೆ ಮಾಡಿದರೂ ಸೌಲಭ್ಯ ನೀಡಿರಲಿಲ್ಲ. ಖಾಲಿ ಹುದ್ದೆ ಭರ್ತಿ ಮಾಡಲಿಲ್ಲ. ಈಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಲ್ಲರಿಗೂ ಅನುಕೂಲ ಮಾಡಿಕೊಟ್ಟಿದೆ. 9 ಸಾವಿರ ನೇಮಕಾತಿ ಮಾಡಿದೆ ಎಂದರು.