ಬೆಂಗಳೂರು:- ಸ್ಥಳೀಯರಿಗೆ ಉದ್ಯೋಗ ನೀಡಲು ಅಸಡ್ಡೆ ತೋರಿದರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯ ಸರಕಾರದಿಂದ ರಿಯಾಯಿತಿ, ಪ್ರೊತ್ಸಾಹ ಧನ ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡು ಉದ್ಯಮಗಳನ್ನ (industries) ಸ್ಥಾಪಿಸಿ,ನಂತರ ಸ್ಥಳೀಯರಿಗೆ ಉದ್ಯೋಗ(Jobs) ನೀಡಲು ಅಸಡ್ಡೆ ತೋರಿದರೇ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಹುಬ್ಬಳ್ಳಿಯಲ್ಲಿ ಇನ್ಪೋಸಿಸ್ ಕಂಪನಿ ತನ್ನ ಘಟಕ ಸ್ಥಾಪಿಸುತ್ತದೆ ಅಂತೇಳಿ ಜಮೀನು ಪಡೆದುಕೊಂಡು ಗಿಡಗಳನ್ನು ನೆಟ್ಟು ತೋಟ ಮಾಡಿಕೊಂಡಿದ್ದಾರೆ. ಒಬ್ಬರಿಗೂ ಕೂಡ ಅವರು ಉದ್ಯೋಗ ನೀಡಿಲ್ಲ, ಜಮೀನು ಒದಗಿಸುವ ಸಂದರ್ಭದಲ್ಲಿ ಮಂಚೂಣಿಯಲ್ಲಿದ್ದ ನಾನು ಇಂದು ಅಲ್ಲಿನ ರೈತರ ಎದುರುಗಡೆ ನಿಂತು ಮಾತನಾಡಲು ಆಗುತ್ತಿಲ್ಲ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅಸಮಾಧಾನ ತೋಡಿಕೊಂಡರು. ಈ ವೇಳೆ ಪ್ರತಿಕ್ರಿಯಿಸಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಉದ್ಯಮಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಭೂಮಿ ಕಳೆದುಕೊಂಡವರಿಗೆ ಅವರವರ ಅರ್ಹತೆಗೆ ಅನುಸಾರವಾಗಿ ಉದ್ಯೋಗ ನೀಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಕೇಶವಪ್ರಸಾದ್ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ ಎಂ.ಬಿ. ಪಾಟೀಲ, ಏಕಗವಾಕ್ಷಿ ಅನುಮೋದನಾ ಸಮಿತಿಯು ಹಸಿರು ನಿಶಾನೆ ನೀಡಿರುವ ಈ ಯೋಜನೆಗಳ ಪೈಕಿ 24 ಯೋಜನೆಗಳು ಮಾತ್ರ ಬೆಂಗಳೂರು ಜಿಲ್ಲೆಯಲ್ಲಿದ್ದು, ಉಳಿದ 217 ಯೋಜನೆಗಳು ಹೊರಗಿನ ಜಿಲ್ಲೆಗಳಲ್ಲಿವೆ. ಬೆಂಗಳೂರು ಜಿಲ್ಲೆಯಲ್ಲಿ 21,537 ಕೋಟಿ ರೂ. ಹೂಡಿಕೆ ಆಗುತ್ತಿದ್ದು, 19,243 ಉದ್ಯೋಗ ಸೃಷ್ಟಿ ಆಗಲಿವೆ. ಉಳಿದ ಜಿಲ್ಲೆಗಳಲ್ಲಿ 28,488 ಕೋಟಿ ರೂ. ಬಂಡವಾಳ ಹೂಡಿಕೆ ಆಗುತ್ತಿದ್ದು, 38,808 ಮಂದಿಗೆ ಉದ್ಯೋಗ ಸಿಗಲಿವೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು.