ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆದಿದ್ದು ಸದ್ಯ ಸೈಫ್ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಕುವಿನಿಂದ ಇರಿತಕ್ಕೆ ಒಳಗಾದ ಸೈಫ್ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅವರಿಗೆ ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ಅವರ ಆರೋಗ್ಯದ ಬಗ್ಗೆ ಪದೇ ಪದೇ ಅಪ್ಡೇಟ್ ಕೇಳಲಾಗುತ್ತಿದೆ. ಹೀಗಾಗಿ ಪಾಪರಾಜಿಗಳು ಆಸ್ಪತ್ರೆ ಹಾಗೂ ಸೈಫ್ ಮನೆ ಬಳಿ ಓಡಾಡುತ್ತಿದ್ದಾರೆ. ಇದಕ್ಕೆ ಕರೀನಾ ಕಪೂರ್ ಸಿಟ್ಟಾಗಿದ್ದು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕರೀನಾ ಕಪೂರ್ ಅವರು ಸದ್ಯ ಟೆನ್ಷನ್ನಲ್ಲಿ ಇದ್ದಾರೆ. ಕುಟುಂಬಕ್ಕೆ ಈ ಪರಿಸ್ಥಿತಿ ಬಂದಿರುವುದರಿಂದ ಅವರು ಸಾಕಷ್ಟು ಆಘಾತದಲ್ಲಿ ಇದ್ದಾರೆ. ಅವರ ಕುಟುಂಬ ಕಷ್ಟದಲ್ಲಿ ಇದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಖಾಸಗಿತನಕ್ಕೆ ಗೌರವ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ, ಇದನ್ನು ಯಾರೂ ಪಾಲಿಸುತ್ತಿಲ್ಲ.
ಕರೀನಾ ಮನೆಗೆ ಆಟಿಕೆ ತರುತ್ತಿರುವುದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋನ ಪಾಪರಾಜಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ‘ತೈಮೂರ್ ಹಾಗೂ ಜೇ ಅಲಿಗೆ ಹೊಸ ಆಟಿಕೆ’ ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿತ್ತು. ಇದು ಕರೀನಾ ಗಮನಕ್ಕೆ ಬಂದಿದೆ. ‘ಇದನ್ನು ಈಗಲೇ ನಿಲ್ಲಿಸಿ. ನಿಮಗೆ ಹೃದಯ ಇದೆಯೇ? ನಮ್ಮನ್ನು ಒಂಟಿಯಾಗಿ ಇರಲು ಬಿಡಿ’ ಎಂದು ಕರೀನಾ ಸಿಟ್ಟಲ್ಲಿ ಬರೆದುಕೊಂಡಿದ್ದರು. ಇದಕ್ಕೆ ನಮಸ್ಕರಿಸುತ್ತಿರುವ ಎಮೋಜಿ ಕೂಡ ಹಾಕಿದ್ದಾರೆ. ಆ ಬಳಿಕ ಏನನ್ನಿಸಿತೋ ಏನೋ ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ.
ಮೊಹಮದ್ ಶೈಫುಲ್ಲಾ ಇಸ್ಲಾಮ್ ಶಹಜಾದ್ ಎಂಬಾತ ಸೈಫ್ ಮೇಲೆ ದಾಳಿ ಮಾಡಿದ್ದು ಸದ್ಯ ಆತನನ್ನು ಬಂಧಿಸಲಾಗಿದ್ದು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪಿಯು ಆತ ದಾಳಿ ಮಾಡಿದ್ದನ್ನು ಒಪ್ಪಿಕೊಡಿದ್ದಾನೆ.