ನವದೆಹಲಿ:- ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಜನರಿಗೆ ಭದ್ರತೆ ಇಲ್ಲದಂತಾಗಿದೆ ಎಂದು HD ಕುಮಾರಸ್ವಾಮಿ ಕಿಡಿಕಾರಿದರು.
ನವದೆಹಲಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ನಕಲಿ ಗಾಂಧಿಗಳ ಪಕ್ಷ ಈಗ ಬೆಳಗಾವಿಯಲ್ಲಿ ಅಸಲಿ ಗಾಂಧಿಯವರ ಹಾಡಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿದೆ ಎಂದರು. ರಾಜ್ಯದಲ್ಲಿ ಅತ್ಯಾಚಾರ, ದರೋಡೆಗಳು ನಡೆಯುತ್ತಿವೆ. ಅಪರಾಧಿ ಚಟುವಟಿಕೆಗಳು ಮಿತಿ ಮೀರಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಜನರಿಗೆ ಭದ್ರತೆ ಇಲ್ಲದಾಗಿದೆ ಎಂದು ಆರೋಪಿಸಿದರು.
ಸರ್ಕಾರದಲ್ಲಿ ಒಬ್ಬ ತಹಸಿಲ್ದಾರ್, ಉಪ ವಿಭಾಗಾಧಿಕಾರಿಯನ್ನು ನಿಯಂತ್ರಣ ಮಾಡುವುದು ಇವರಿಗೆ ಆಗುತ್ತಿಲ್ಲ. ಕಾನೂನು ಸುವ್ಯವಸ್ಥೆ ಮೇಲೆ ನಿಯಂತ್ರಣ ಇಲ್ಲ. ಕಾಂಗ್ರೆಸ್ಸಿನವರು ಕರ್ನಾಟಕವನ್ನು ಸಂಪೂರ್ಣ ಮುಗಿಸಲಿಕ್ಕೇ ಬಂದಿದ್ದಾರೆ. ಇದೇನಾ ಗಾಂಧಿ ತತ್ವದ ಆಡಳಿತ ಸಿದ್ದರಾಮಯ್ಯನವರೇ ಎಂದು ಕೇಂದ್ರ ಸಚಿವರು ಗುಡುಗಿದರು.
ರಾಜ್ಯದಲ್ಲಿ ಗರ್ಭಿಣಿಯರ ಸರಣಿ ಸಾವಿನ ಪ್ರಕರಣಗಳ ವಾಸ್ತವಾಂಶವನ್ನು ಜನರ ಮುಂದೆ ಇಟ್ಟಿಲ್ಲ ಯಾಕೆ? ಯಾಕೆ ಅಷ್ಟು ಜನ ತಾಯಂದಿರು, ನವಜಾತ ಶಿಶುಗಳು ಬಲಿಯಾದದ್ದು? ಇಲ್ಲಿಯೂ 40% ಕಮಿಷನ್ ಎನ್ನುವ ಮಾತು ಕೇಳಿ ಬರುತ್ತಿದೆ. ರಾಜ್ಯದ ಜನರ ತೆರಿಗೆ ಹಣವನ್ನು ಯಾವ ರೀತಿ ಬಳಕೆ ಮಾಡುತ್ತಿದ್ದೀರಿ? ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.