ವಯ್ನಾಡ್:– ಭೂಕುಸಿತ ಪೀಡಿತ ವಯನಾಡ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಕೊಡಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಕಣ್ಣೂರಿಗೆ ಆಗಮಿಸುತ್ತಾರೆ ಮತ್ತು ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಪ್ರಾಣಿ ಪ್ರಿಯರೇ ಈ ಸುದ್ದಿ ಮಿಸ್ ಮಾಡ್ದೆ ನೋಡಿ: ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವು!
ಭೇಟಿ ವೇಳೆ ಪುನರ್ವಸತಿ ಸೌಲಭ್ಯಗಳ ಕುರಿತು ಪರಿಶೀಲನೆನಡೆಸಿ, ಬದುಕುಳಿದವರೊಂದಿಗೆ ಸಂವಾದ ನಡೆಸಲಿದ್ದಾರೆ. ಮೋದಿ ಅವರು ಮಧ್ಯಾಹ್ನ 12:15ರ ಸುಮಾರಿಗೆ ಭೂಕುಸಿತ ಪೀಡಿತ ಪ್ರದೇಶವನ್ನು ತಲುಪುತ್ತಾರೆ. ಅಲ್ಲಿ ಸಂತ್ರಸ್ತರನ್ನು ಸ್ಥಳಾಂತರಿಸುವ ಪ್ರಯತ್ನಗಳ ಕುರಿತು ರಕ್ಷಣಾ ಪಡೆಗಳಿಂದ ಮಾಹಿತಿ ನೀಡಲಾಗುತ್ತದೆ.
ಇದೇ ವೇಳೆ ಪುನರ್ವಸತಿ ಕಾರ್ಯಗಳ ಮೇಲ್ವಿಚಾರಣೆ ಮಾಡಲಾಗುತ್ತದೆ. ಪರಿಹಾರ ಶಿಬಿರ ಮತ್ತು ಆಸ್ಪತ್ರೆಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಸಂತ್ರಸ್ತರು ಮತ್ತು ದುರಂತದಲ್ಲಿ ಬದುಕುಳಿದವರನ್ನು ಭೇಟಿ ಮಾಡಿ ಸಂವಾದ ನಡೆಸಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಭೂಕುಸಿತ ಪೀಡಿತ ಸ್ಥಳಕ್ಕೆ ಭೇಟಿ ನೀಡಿದ ನಂತರ ಘಟನೆ ಮತ್ತು ಪ್ರಸ್ತುತ ಪರಿಹಾರ ಕಾರ್ಯಾಚರಣೆಗಳ ಕುರಿತು ವಿವರವಾದ ಬ್ರೀಫಿಂಗ್ ಪಡೆಯಲು ಪ್ರಧಾನಿ ಮೋದಿ ಅವರು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಜುಲೈ 30 ರಂದು ಸಂಭವಿಸಿದ ಭೂಕುಸಿತದಲ್ಲಿ ಇಲ್ಲಿಯವರೆಗೆ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಭಾರತೀಯ ಸೇನೆ, ಎನ್ಡಿಆರ್ಎಫ್ ಮತ್ತು ಸ್ಥಳೀಯ ತುರ್ತು ಪ್ರತಿಕ್ರಿಯೆ ವಿಭಾಗಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿವೆ. ಇದೀಗ ರಕ್ಷಣಾ ಕಾರ್ಯಾಚರಣೆ ತಂಡಗಳು ಅರಣ್ಯ ಪ್ರದೇಶಗಳ ಮೇಲೆ ಕೇಂದ್ರೀಕರಿಸಿವೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಸಂಸತ್ತಿನಲ್ಲಿ ಮಾತನಾಡುತ್ತಾ ವಯನಾಡಿನಲ್ಲಿ ಭೂಕುಸಿತದಿಂದ ಸಂತ್ರಸ್ತರಾದ ಜನರಿಗೆ ‘ಹೆಚ್ಚಿನ ಪರಿಹಾರ’ ಮತ್ತು ‘ಸಮಗ್ರ ಪುನರ್ವಸತಿ ಪ್ಯಾಕೇಜ್’ ಘೋಷಿಸಬೇಕು ಎಂದು ಒತ್ತಾಯಿಸಿದರು. ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ವಿಪತ್ತನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.