ಬೆಂಗಳೂರು;- ಸಿಲಿಕಾನ್ ಸಿಟಿಯಲ್ಲಿ ಈರುಳ್ಳಿಯ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಾಧಾರಣ ಗುಣಮಟ್ಟದ ಈರುಳ್ಳಿಯೂ ಕ್ವಿಂಟಲ್ಗೆ ₹ 4000 ದಿಂದ 4300 ರೂಪಾಯಿಗೆ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ ಮೂಲಕ ಬೆಲೆ ನಿಯಂತ್ರಣದ ಉದ್ದೇಶಕ್ಕಾಗಿ ಇಲ್ಲಿಗೆ ಪೂರೈಸುತ್ತಿರುವ ಈರುಳ್ಳಿಯೂ ಸಹ ಕ್ವಿಂಟಲ್ಗೆ ಸುಮಾರು 4600 ರೂಪಾಯಿಗಳ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಮಹಾರಾಷ್ಟ್ರದ ಈರುಳ್ಳಿ 6000 ರೂಪಾಯಿ ಗಡಿ ದಾಟುತ್ತಿದೆ.
ಸಾಗಣೆ ವೆಚ್ಚ, ಕೂಲಿ, ಮತ್ತಿತರ ಕಾರಣದಿಂದ ಚಿಲ್ಲರೆ ಮಾರುಕಟ್ಟೆಗೆ ತಲುಪುವ ವೇಳೆಗೆ ಈರುಳ್ಳಿಯ ಬೆಲೆ ಮತ್ತಷ್ಟೂ ಹೆಚ್ಚಾಗುತ್ತಿದೆ. ನಗರದ ಕೆ.ಆರ್. ಮಾರುಕಟ್ಟೆ, ಶೇಷಾದ್ರಿಪುರ, ಮಲ್ಲೇಶ್ವರ, ಜಯನಗರ ಮಾರುಕಟ್ಟೆಗಳಲ್ಲಿ ಕೆಜಿಗೆ 65 ರಿಂದ 75 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಹಾಪ್ಕಾಮ್ಸ್ ಮತ್ತು ಇತರೆಡೆ ಉತ್ತಮ ಗುಣಮಟ್ಟದ ಈರುಳ್ಳಿಗೆ 85 ರೂಪಾಯಿ ವರೆಗೆ ನಿಗದಿಪಡಿಸಲಾಗಿದೆ. ಕಳೆದ ತಿಂಗಳು ಈರುಳ್ಳಿಯ ಬೆಲೆ ಕೇವಲ 25 ರೂಪಾಯಿ ಇದ್ದದ್ದು ಇಷ್ಟು ಹೆಚ್ಚಳವಾಗಿರುವುದು ಗ್ರಾಹಕರ ಕಣ್ಣಿನಲ್ಲಿ ನೀರನ್ನು ತರಿಸುತ್ತಿದೆ
ಬರ ಪರಿಸ್ಥಿತಿ ಎದುರಾಗಿರುವ ಕಾರಣ ಈ ಬಾರಿ ರಾಜ್ಯದಲ್ಲಿ ಈರುಳ್ಳಿ ತೀರಾ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗಿದೆ. ಮುಖ್ಯವಾಗಿ ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಂದ ಈರುಳ್ಳಿ ಪೂರೈಕೆ ಕುಂಠಿತವಾಗಿರುವುದು ಬೆಲೆ ದಿನದಿಂದ ದಿನಕ್ಕೆ ಏರುಕಿಗೆ ಕಾರಣವಾಗಿದೆ. ಹೀಗೆಯೇ ಮುಂದುವರಿದರೆ ಇನ್ನು ಕೆಲ ದಿನಗಳಲ್ಲಿ ಮಾರಾಟ ಬೆಲೆ ಕೆಜಿಗೆ 100 ರಿಂದ 120 ರೂಪಾಯಿಗೆ ತಲುಪಬಹುದು ಎಂದು ವರ್ತಕರು ವಿಶ್ಲೇಷಿಸಿದ್ದಾರೆ.
ಯಶವಂತಪುರ ಎಪಿಎಂಸಿಗೆ ಈ ವೇಳೆಯಲ್ಲಿ 1 ಲಕ್ಷಕ್ಕಿಂತ ಹೆಚ್ಚು ಮೂಟೆ ಈರುಳ್ಳಿ ಬರುತ್ತಿತ್ತು. ಆದರೆ, ಸದ್ಯ ಸುಮಾರು 60 ಸಾವಿರ ಮೂಟೆಗಳು ಮಾತ್ರ ಬಂದಿದೆ. ಬಾಗಲಕೋಟೆ, ಗದಗ, ವಿಜಯಪುರ ಸೇರಿ ಉತ್ತರ ಕರ್ನಾಟಕ ಭಾಗದಿಂದ ಕೂಡ ನಿರೀಕ್ಷಿತ ಪ್ರಮಾಣದ ಪೂರೈಕೆ ಇಲ್ಲ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದಲ್ಲೂ ಮಳೆಯ ಅಭಾವದ ಕಾರಣ ಅಲ್ಲಿಂದಲೂ ಈರುಳ್ಳಿ ಬರುವುದು ಕಡಿಮೆಯಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಹಲವು ರಾಜ್ಯಗಳಿಂದ ಪೂರೈಕೆ ಹೆಚ್ಚಾಗಬಹುದು” ಎಂದು ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಬಿ. ರವಿಶಂಕರ್ ಮಾಹಿತಿ ನೀಡಿದ್ದಾರೆ.