ಬೆಂಗಳೂರು:- ಕುಮಾರಸ್ವಾಮಿ ಆರೋಪ ನಿಜವಾಗಿದ್ದರೆ ರಾಜೀನಾಮೆ ಕೊಡಲು ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ವರ್ಗಾವಣೆ ಅಥವಾ ಹಣದ ಬಗ್ಗೆಯಾಗಲಿ ಮಾತನಾಡಿಲ್ಲ ಎಂದರು.
ಒಎಸ್ಡಿ ಮಹದೇವ್ ಅವರಿಗೆ ಅಕ್ರಮವಾಗಿ ಬಡ್ತಿ ನೀಡಿ ಇಟ್ಟುಕೊಳ್ಳಲಾಗಿದೆ ಎಂಬ ಬಗ್ಗೆ ಉತ್ತರಿಸಿ ಮಹದೇವ್ ಅವರು ನಮ್ಮೂರಿನವರೇ, ಉಪನೋಂದಣಾಧಿಕಾರಿಯಾಗಿದ್ದಾರೆ. ಅವರನ್ನು ನಮ್ಮ ಕಚೇರಿಗೆ ತೆಗೆದುಕೊಳ್ಳಲಾಗಿದೆ. ಅದರಲ್ಲಿ ತಪ್ಪೇನು ಎಂದರು. ವೀಡಿಯೋದಲ್ಲಿ ಹಣದ ಬಗ್ಗೆ ಮಾತನಾಡಿದ್ದಾರೆಯೇ? ಅಥವಾ ವರ್ಗಾವಣೆಯ ಬಗ್ಗೆ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಅದನ್ನು ವರ್ಗಾವಣೆಗೆ ತಳಕು ಹಾಕಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇಂದಿನವರೆಗೆ ಒಂದು ವರ್ಗಾವಣೆಗೆ ಹಣ ಪಡೆದಿದ್ದೇನೆ ಎಂದು ನಿರೂಪಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಪುನರುಚ್ಚರಿಸಿದರು.
ಆಶ್ರಯ ಸಮಿತಿ ಅಧ್ಯಕ್ಷರು ಹಾಗೂ ಕೆಡಿಪಿ ಸದಸ್ಯರಾಗಿರುವ ಹಾಗೂ ಕ್ಷೇತ್ರವನ್ನು ನೋಡಿಕೊಳ್ಳುತ್ತಿರುವ ಯತೀಂದ್ರ ನನ್ನ ಬಳಿ ಮಾತನಾಡಿ ಸಿಎಸ್ಆರ್ ನಿಧಿಯ ಕುರಿತು ಪ್ರಶ್ನಿಸಿದಾಗ ಪಟ್ಟಿಯನ್ನು ಮಹದೇವಪ್ಪ ಅವರಿಗೆ ನೀಡಲಾಗಿದೆ ಎಂದು ತಿಳಿಸಿದೆ. ಕುಮಾರಸ್ವಾಮಿ ಅವರ ಕಾಲದಲ್ಲಿ ಏನಾಗುತ್ತಿತ್ತೋ ಅದರಿಂದ ಹೊರಬರಲು ಅವರಿಗೆ ಆಗುತ್ತಿಲ್ಲ.
ಮಾಜಿ ಮುಖ್ಯಮಂತ್ರಿಯಾಗಿ ತಮ್ಮ ಮನೆಗೆ ಅಕ್ರಮವಾಗಿ ವಿದ್ಯುತ್ ಪಡೆದು ಮನೆಯನ್ನು ಬೆಳಗಿಸಿದ್ದಾರೆ. ಇದು ಅಪರಾಧವಲ್ಲವೇ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಅದನ್ನು ಮುಚ್ಚಿಹಾಕಲು ಈ ರೀತಿ ಮಾಡುತ್ತಿದ್ದಾರೆ ಎಂದರು. ಯಾರೇ ತಪ್ಪು ಮಾಡಿದರು ಎಫ್.ಐ.ಆರ್ ಆಗಬೇಕು. ಅದನ್ನು ಮುಚ್ಚಿಹಾಕಲು ಹೀಗೆ ಹೇಳುತ್ತಿದ್ದಾರೆ ಎಂದರು.