ಮಂಡ್ಯ :- ಕಳೆದ ಎರಡು ವರ್ಷಗಳಿಂದ ಮದ್ದೂರು ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ.ಎನ್.ನರಸಿಂಹಮೂರ್ತಿ ಅವರು ವರ್ಗಾವಣೆಗೊಂಡಿದ್ದು, ಅವರ ಸ್ಥಾನಕ್ಕೆ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರೇಡ್ 2 ತಹಶೀಲ್ದಾರ್ ಆಗಿದ್ದ, ಕೆ.ಎಸ್.ಸೋಮಶೇಖರ್ ಅವರು ಇಂದು ಅಧಿಕಾರ ವಹಿಸಿಕೊಂಡರು. ಮದ್ದೂರು ತಾಲ್ಲೂಕಿಗೆ ವರ್ಗಾವಣೆಯಾದ ನೂತನ ತಹಶೀಲ್ದಾರ್ ಕೆ.ಎಸ್.ಸೋಮಶೇಖರ್ ಸೋಮವಾರ ತಾಲ್ಲೂಕು ಆಡಳಿತ ಭವನದಲ್ಲಿ ಅಧಿಕಾರ ಸ್ವೀಕರಿಸಿದರು.
ಇನ್ನು ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಥಮ ತಾಲೂಕು ಇದಾಗಿದೆ. ಮೊದಲು ಅಧಿಕಾರಿಗಳ ಸಭೆ ನಡೆಸಿ ಕಚೇರಿಯ ಸಂಪೂರ್ಣ ಮಾಹಿತಿ ಪಡೆಯಲಾಗುವುದು. ನಂತರ ಆಡಳಿತಕ್ಕೆ ಚುರುಕು ನೀಡಲಾಗುತ್ತದೆ. ಆಡಳಿತಾತ್ಮಕ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರು.
ತಾಲ್ಲೂಕು ಕಚೇರಿಯ ಪ್ರತಿಯೊಂದು ಕೆಲಸಗಳನ್ನು ನಿರ್ದಿಷ್ಟ ಅವಧಿಯಲ್ಲಿ ಮಾಡಬೇಕು. ಸಾರ್ವಜನಿಕರು ಮತ್ತು ರೈತರನ್ನು ಅನಗತ್ಯವಾಗಿ ಕಚೇರಿಗೆ ಅಲೆಯುವುದಕ್ಕೆ ಕಡಿವಾಣ ಹಾಕಲಾಗುವುದು. ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಎಲ್ಲರ ವಿಶ್ವಾಸದೊಂದಿಗೆ ಅಧಿಕಾರ ನಿರ್ವಹಿಸುತ್ತೇನೆ ಎಂದು ಹೇಳಿದರು.
ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಕೇಸ್: ತನಿಖೆ ವೇಳೆ ಸ್ಪೋಟಕ ವಿಚಾರ ಬೆಳಕಿಗೆ
ನಿರ್ಗಮಿತ ತಹಶೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಮಾತನಾಡಿ, ಮದ್ದೂರು ತಹಶೀಲ್ದಾರ್ ಆಗಿ ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದು ಖುಷಿ ಕೊಟ್ಟಿದೆ. ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸ್ಮಶಾನಗಳ ಸಮಸ್ಯೆ,
ಆತಗೂರು ಹೋಬಳಿಯ ರಿಸರ್ವೆ ಸೇರಿ ಇತರೆ ಪ್ರಮುಖ ಕೆಲಸಗಳು ಇನ್ನೂ ಬಾಕಿ ಇವೆ. ಈ ಬಗ್ಗೆ ನೂತನ ತಹಶೀಲ್ದಾರ್ಗೆ ತಿಳಿಸಿದ್ದು, ಅವರಿಗೂ ಸಹಕರಿಸುವಂತೆ ಮನವಿ ಮಾಡಿದರು. ಇದೇ ವೇಳೆ ಶಿರಸ್ತೇದಾರ್ ಗಳಾದ ರೂಪ, ಚಂದ್ರಶೇಖರ್, ಯೋಗನರಸಿಂಹನ್, ಹಾಗೂ ವಿವಿಧ ಶಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ