ಮಂಡ್ಯ:- ಕನ್ನಂಬಾಡಿ ಅಣೆಕಟ್ಟು ಹೊಸ ಇತಿಹಾಸ ನಿರ್ಮಿಸಿದ್ದು, ಜನವರಿಯಲ್ಲೂ ಗರಿಷ್ಠ 124 ಅಡಿ ನೀರು ಸಂಗ್ರಹಣೆ ಮೂಲಕ ದಾಖಲೆ ಬರೆದಿದೆ.
ಕಳೆದ 156 ದಿನಗಳಿಂದ ನಿರಂತರವಾಗಿ 124 ಅಡಿ ಕಾಯ್ದುಕೊಂಡಿದೆ. ಈಗಲೂ ಜಲಾಶಯ ಭರ್ತಿಯಾಗಿರುವ ಕಾರಣ ಈ ಬೇಸಿಗೆಯಲ್ಲಿ ಕಾವೇರಿ ಕೊಳ್ಳದ ಅನ್ನದಾತರು, ವಿಶೇಷವಾಗಿ ಬೆಂಗಳೂರಿಗರಿಗರಿಗೆ ನೀರಿನ ಅಭಾವ ಸೃಷ್ಟಿಯಾಗಲಾರದು. ಈ ಮೂಲಕ ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಹೀಗಾಗಿ ಸರ್ಕಾರ ಮಂಗಳವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬೇಸಿಗೆ ಬೆಳೆ ಬೆಳೆಯಲು ರೈತರಿಗೆ ನೀರೊದಗಿಸುವ ನಿರ್ಧಾರ ಮಾಡಿದೆ. ಸರ್ಕಾರದ ಈ ನಿರ್ಧಾರ ರೈತರ ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮ ಇಮ್ಮಡಿಗೊಳಿಸಿದೆ
ಎರಡು ವರ್ಷಗಳ ಮಳೆ ಅಭಾವದಿಂದಾಗಿ ತೀವ್ರ ಬರಗಾಲ ಸೃಷ್ಟಿಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ವರುಣನ ಕೃಪೆಯಿಂದ ಕಾವೇರಿ ಕಣಿವೆಯಲ್ಲಿ ವ್ಯಾಪಕ ಮಳೆಯಾಗಿದೆ. ಇದರಿಂದ ಕನ್ನಂಬಾಡಿ ಅಣೆಕಟ್ಟು ಕೂಡ ಭರ್ತಿಯಾಗಿದೆ. ಪ್ರಸಕ್ತ ವರ್ಷ ತಮಿಳುನಾಡಿಗೆ ಬಿಡಬೇಕಾದ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರು ಹರಿದಿದೆ. ಹೀಗಾಗಿ ಈ ಬಾರಿ ಕಾವೇರಿ ಸಮಸ್ಯೆ ಕೂಡ ಇಲ್ಲ, ನೀರಿನ ಅಭಾವ ಕೂಡ ಇಲ್ಲ ಎನ್ನಲಾಗಿದೆ.