ಮೈಸೂರು: ಉತ್ತರ ಪ್ರದೇಶದಲ್ಲಿರುವ (Uttar Pradesh) ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರ (Sri Rama Mandir) ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಕೋಟ್ಯಾನುಕೋಟಿ ರಾಮನ ಭಕ್ತರು ರಾಮನಾಮ ಜಪಿಸುತ್ತಿದ್ದಾರೆ. ಈ ನಡುವೆ ಅಯೋಧ್ಯೆಯಲ್ಲಿ ಪ್ರತಿಷ್ಟಾಪನೆಗೊಳಿಸಲು ಕಳುಹಿಸಿರುವ ಬಾಲ ಶ್ರೀರಾಮನ ಮೂರ್ತಿ ಕೆತ್ತನೆಗೆ ಬಳಸಿರುವುದು ಮೈಸೂರಿನ ಕೃಷ್ಣ ಶಿಲೆ (Mysuru Krishna Stone) ಎಂಬ ವೀಶೇಷ ಸಂಗತಿಯೊಂದು ಬೆಳಕಿಗೆ ಬಂದಿದೆ.
ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಜಮೀನಿನಲ್ಲಿ 6 ತಿಂಗಳ ಹಿಂದೆ ಸಿಕ್ಕ ಬೃಹತ್ ಕೃಷ್ಣಶಿಲೆಯಲ್ಲೇ ಬಾಲ ರಾಮನ ಮೂರ್ತಿ (Sri Rama Idol) ಕೆತ್ತಲಾಗಿದೆ. ಅಯೋಧ್ಯೆಯ ಟ್ರಸ್ಟಿಗಳು ಈ ಸ್ಥಳಕ್ಕೆ ಬಂದು ಕಲ್ಲು ಪರೀಕ್ಷೆ ಮಾಡಿ ಕಲ್ಲನ್ನು ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿನ ಮಣ್ಣನ್ನು ಕೂಡ ಕುಂಭದಲ್ಲಿ ತೆಗೆದು ಕೊಂಡು ಹೋಗಿ ರಾಮ ಮಂದಿರದ ಗರ್ಭಗುಡಿಯ ಒಳಗಿಟ್ಟಿದ್ದಾರೆ ಎಂದು ಕೃಷ್ಣಶಿಲೆ ಅರ್ಪಿಸಿದ ಗುತ್ತಿಗೆದಾರ ಶ್ರೀನಿವಾಸ್ ತಿಳಿಸಿದ್ದಾರೆ.
ಆಯ್ಕೆಯಾಗುತ್ತಾ ಕರ್ನಾಟಕದ ಬಾಲರಾಮ ಮೂರ್ತಿ?
ಜನವರಿ 22ರಂದು ಶ್ರೀರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಬಾಲ ಶ್ರೀರಾಮ ಮೂರ್ತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಟ್ಟು ಆಯ್ಕೆಗೆ ಮೂರು ಮೂರ್ತಿಗಳನ್ನ ಕೆತ್ತನೆ ಮಾಡಲಾಗಿದ್ದು, ರಾಮ ಮಂದಿರ ಟ್ರಸ್ಟ್ ಸಭೆಯ ಬಳಿಕ ಮೂರ್ತಿಯನ್ನ ಆಯ್ಕೆ ಮಾಡಲಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಇಬ್ಬರು ಕರ್ನಾಟಕ ಶಿಲ್ಪಿಗಳು, ಓರ್ವ ರಾಜಸ್ಥಾನ ಮೂಲದ ಶಿಲ್ಪಿಯಿಂದ ನಿರ್ಮಾಣ ಗೊಂಡಿರುವ ಕರ್ನಾಟಕ ಮೂಲದ ಬಾಲರಾಮನ ಮೂರ್ತಿ ಸಹ ಇದೆ. ಈ ಮೂರ್ತಿ ಪ್ರತಿಷ್ಟಾಪನೆಗೆ ಆಯ್ಕೆಯಾಗುತ್ತಾ? ಅಯೋಧ್ಯೆ ರಾಮ ಮಂದಿರದಲ್ಲಿ ಕರ್ನಾಟಕದ ನಂಟು ಉಳಿಯುತ್ತಾ? ಅನ್ನೋದನ್ನ ಕಾದುನೋಡಬೇಕಿದೆ.