ಕೆ.ಆರ್.ಪುರ, ಜ.14- ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನ ಪ್ರಯುಕ್ತ ಮಹದೇವಪುರ ಕ್ಷೇತ್ರದ ಹೂಡಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಜಿಎಲ್ ಆರ್ ಡೆವಲಪರ್ಸ್ ವತಿಯಿಂದ ಏರ್ಪಡಿಸಿದ್ದ ಮ್ಯಾರಥಾನ್ ಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಸ್ವಾಮಿ ವಿವೇಕಾನಂದರ ತತ್ವ ಮತ್ತು ಆದರ್ಶಗಳು ಹಿಂದೆಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿದ್ದು, ಸಮಕಾ ಲೀನವಾಗಿದೆ. ಯುವ ಜನರು ಅದನ್ನು ಅರ್ಥೈಸಿಕೊಂಡು ಪಾಲಿಸಿದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರು ಯುವ ಜನತೆಗೆ ಮಾದರಿಯಾಗಿದ್ದು, ಪ್ರತಿಯೊಬ್ಬರು ಅವರ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಗುರಿ ಹೊಂದುವುದು ಮುಖ್ಯವಾಗಿದ್ದು, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಗುರಿ ಯನ್ನು ತಲುಪುವ ಕಡೆ ಗಮನಹರಿಸಬೇಕು, ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಜವಾಬ್ದಾರಿ ಇದ್ದು, ಯಾವುದೇ ಕೆಲಸವನ್ನು ಕೈಗೊಂಡರು ಅದನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಎಂದರು.
ಸದೃಢ ಆರೋಗ್ಯಕ್ಕಾಗಿ ವ್ಯಾಯಾಮ ಹಾಗೂ ಕ್ರೀಡೆಗಳು ಹೆಚ್ಚು ಸಹಕಾರಿಯಾಗಿದ್ದು, ಕ್ರೀಡೆಗಳಲ್ಲಿ ಸಕ್ರೀಯವಾಗಿ ಹಾಗೂ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವಂತೆ ಸಲಹೆ ನೀಡಿದರು.
ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಮಾತನಾಡಿ ಮಹದೇವಪುರ ಕ್ಷೇತ್ರದ ಹೂಡಿ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ 24 ಕಿ.ಮೀ ಸೈಕಲ್ ರೈಡ್, 10 ಕಿಲೋಮೀಟರ್, 5 ಕಿಲೋಮೀಟರ್, ಮ್ಯಾರಥನ್ ನಲ್ಲಿ ಯುವ ಜನತೆ ಉತ್ಸಾಹದಿಂದ ಭಾಗವಹಿಸಿದ್ದು ಸಂತಸ ತಂದಿದ್ದು,ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ವಿ ಕಾರ್ಯಕ್ರಮ ಆಯೋಜನೆ ಮಾಡಲಿ ಎಂದು ಶುಭ ಹಾರೈಸಿದರು.
ಮ್ಯಾರಥಾನ್ ನಲ್ಲಿ ಸ್ವಾಮಿ ವಿವೇಕಾನಂದರ ಮೆರವಣಿಗೆಯನ್ನು ಆಯೋಜಿಸಿ ಮ್ಯಾರಥಾನ್ ನಲ್ಲಿ ಭಾಗವಹಿಸಿ ಗೆದ್ದ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಮಂಡಲ ಅಧ್ಯಕ್ಷರಾದ ಮನೋಹರ್ ರೆಡ್ಡಿ, ನಟರಾಜ್,ಆಯೋಜಕರಾದ ಹೂಡಿ ಪಿಳ್ಳಪ್ಪ, ಎಲ್.ರಾಜೇಶ್, ಮುಖಂಡರಾದ ಶ್ರೀಧರ್ ರೆಡ್ಡಿ,ಬಸವನಗರ ಅಶೋಕ್ ಕುಮಾರ್, ಸತೀಶ್ ರೆಡ್ಡಿ, ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.