ಮುಂಬರುವ 2025ರ ಇಂಡಿಯನ್ಸ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೂ ಮೊದಲೇ ಐದು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆಂದು ವರದಿಯಾಗಿದೆ.
ಒಂದು ಫ್ರಾಂಚೈಸಿ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶವಿರುವುದರಿಂದ ಎಲ್ಲಾ ತಂಡಗಳು ಈ ಬಾರಿ ಸಂಪೂರ್ಣ ಬದಲಾಗಲಿವೆ. ಐಪಿಎಲ್ ಮೆಗಾ ಹರಾಜಿಗೆ ಬಿಸಿಸಿಐ ಈಗಾಗಲೇ ಯೋಜನೆಯನ್ನು ರೂಪಿಸುತ್ತಿದೆ.
ಒಂದು ವೇಳೆ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ತೊರೆದರೆ ಮುಂಬೈ ಇಂಡಿಯನ್ಸ್ಗೆ ದೊಡ್ಡ ಹೊಡೆತ ಬೀಳಲಿದೆ. ಈ ಇಬ್ಬರೂ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮೆಗಾ ಹರಾಜಿಗೂ ಮುನ್ನ ಮುಂಬೈ ಫ್ರಾಂಚೈಸಿ ಈ ಇಬ್ಬರೂ ಆಟಗಾರರ ಜೊತೆ ಮಾತನಾಡಿ ಉಳಿಸಿಕೊಂಡರೂ ಅಚ್ಚರಿ ಇಲ್ಲ. ಇನ್ನು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ಇಳಿಸಿ ಸೂರ್ಯಕುಮಾರ್ಗೆ ನಾಯಕತ್ವ ನೀಡಿದರೂ ಅಚ್ಚರಿ ಇಲ್ಲ.
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆದರೆ ಗುಜರಾತ್ ಟೈಟನ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಬಹುದು ಎಂಬ ವದಂತಿ ಇದೆ. ಮತ್ತೊಂದು ಕಡೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಸೂರ್ಯಕುಮಾರ್ ಯಾದವ್ ಅವರನ್ನು ಪುನಃ ಸೇರಿಸಿಕೊಳ್ಳಲು ಆಸಕ್ತಿಯನ್ನು ಹೊಂದಿದೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಚಾಂಪಿಯನ್ ಆಗಿದೆ.