ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶಕಿಯಾಗಿ ಕಾಲಿವುಡ್ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಐಶ್ವರ್ಯ ರಜನಿಕಾಂತ್ ನಿರ್ದೇಶನದ, ರಜನಿಕಾಂತ್ ನಟನೆಯ ಲಾಲ್ ಸಲಾಂ ಸಿನಿಮಾ ರಿಲೀಸ್ ಆಗಿದ್ದು ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಐಶ್ವರ್ಯ ಮಾಜಿ ಪತಿ ಹಾಡಿದ್ದ ಸೂಪರ್ ಹಿಟ್ ಹಾಡಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ‘ತ್ರಿ’ ಸಿನಿಮಾ ಮೂಡಿ ಬಂದಿತ್ತು. ಧನುಷ್ ಮತ್ತು ಶ್ರುತಿ ಹಾಸನ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದ ಬಗ್ಗೆ ಐಶ್ವರ್ಯ ಪ್ರತಿಕ್ರಿಯಿಸಿ, ‘ತ್ರಿ’ ಚಿತ್ರ ಪ್ರಯೋಗಾತ್ಮಕ ಸಿನಿಮಾವಾಗಿತ್ತು. ‘ಕೊಲವೆರಿ ಡಿ’ ಹಾಡು ಸೂಪರ್ ಹಿಟ್ ಆಗಿತ್ತು. ಆದರೆ ಅದರಿಂದ ಸಿನಿಮಾಗೆ ತೊಂದರೆಯಾಯ್ತು ಎಂದಿದ್ದಾರೆ. ಧನುಷ್ ಹಾಡಿದ ಹಾಡಿನಿಂದ ಸಿನಿಮಾಗೆ ಯಾವುದೇ ಪ್ರಯೋಜನ ಆಗಲಿಲ್ಲ. ಈ ಹಾಡು ನನ್ನ ಸಿನಿಮಾವನ್ನೇ ನುಂಗಿ ಹಾಕಿತ್ತು. ಹಾಗಾಗಿ ನನಗೆ ನಷ್ಟವಾಯ್ತು ಎಂದಿದ್ದಾರೆ.
‘ಕೊಲವೆರಿ ಡಿ’ ಹಾಡು ಹಿಟ್ ಆದ್ಮೇಲೆ ಜನರ ನಿರೀಕ್ಷೆ ಹೆಚ್ಚಾಯ್ತು. ನನ್ನ ಕಥೆಗೆ ಪ್ರಾಮುಖ್ಯತೆ ಇರುವ ಸಿನಿಮಾ ಮಾಡಿದೆ. ನಾನು ಹೇಳಲು ಪ್ರಯತ್ನಿಸಿದ ಕಥೆ ಪ್ರೇಕ್ಷಕರನ್ನು ತಲುಪಲಿಲ್ಲ. ಅದರಿಂದ ನನ್ನ ಸಿನಿಮಾಗೆ ಪೆಟ್ಟಾಯ್ತು ಎಂದು ಐಶ್ವರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೆ.9ರಂದು ‘ಲಾಲ್ ಸಲಾಂ’ ಸಿನಿಮಾ ರಿಲೀಸ್ ಆಗಿದ್ದು ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ‘ಲಾಲ್ ಸಲಾಂ’ ಚಿತ್ರ ಸೋತಿದೆ. ಸಿನಿಮಾದ ಸೋಲಿನ ಬೇಸರದಲ್ಲಿರುವ ಐಶ್ವರ್ಯ ಇದೀಗ ಧನುಷ್ ಹಾಡಿನ ಕುರಿತು ಹೇಳಿಕೆ ನೀಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.