ಕೋಲಾರ – ಕೋಲಾರ ಜಿಲ್ಲಾ ಹಾಲು ಒಕ್ಕೂಟ (ಕೋಮುಲ್) ಹಾಗೂ ಡಿಸಿಸಿ ಬ್ಯಾಂಕ್ ಮೇಲಿನ ಹಿಡಿತದ ವಿಚಾರದಲ್ಲಿ ಜಿಲ್ಲಾ ಕಾಂಗ್ರೆಸ್ ಶಾಸಕರಲ್ಲೇ ಉಂಟಾಗಿರುವ ಬಣ ಜಗಳ ಮತ್ತೊಂದು ಸ್ವರೂಪ ಪಡೆದುಕೊಂಡಿದೆ.
ಹಾಲು ಒಕ್ಕೂಟದ ಚುನಾವಣೆಗೆ ಕ್ಷೇತ್ರ ಮರುವಿಂಗಡಣೆ ನಿಗದಿಪಡಿಸಲು ಹೈಕೋರ್ಟ್ ಸೂಚನೆಯಂತೆ ನಗರ ಹೊರವಲಯದ ಕಲ್ಯಾಣ ಮಂಟಪದಲ್ಲಿ ನಡೆದ ಒಕ್ಕೂಟದ ವಿಶೇಷ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗದ್ದಲ, ಹಲ್ಲೆಯೊಂದಿಗೆ ‘ಕೈ’ ಶಾಸಕರಾದ ಮಾಲೂರಿನ ಕೆ.ವೈ.ನಂಜೇಗೌಡ ಬಣ ಹಾಗೂ ಬಂಗಾರಪೇಟೆಯ ಎಸ್.ಎನ್.ನಾರಾಯಣಸ್ವಾಮಿ ಬಣಗಳ ನಡುವೆ ಜಟಾಪಟಿ ನಡೆದಿದೆ.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಗೋಪಾಲಮೂರ್ತಿ ಮೇಲೆ ಶಾಸಕ ಹಲ್ಲೆ ನಡೆಸಿದ್ದಾರೆ’ ಎಂದು ನಂಜೇಗೌಡ, ಸ್ವಪಕ್ಷೀಯ ಶಾಸಕ ನಾರಾಯಣಸ್ವಾಮಿ ವಿರುದ್ಧವೇ ಆರೋಪಿಸಿದರು. ಇದಕ್ಕೆ ತಿರುಗೇಟು ನೀಡಿದ ನಾರಾಯಣಸ್ವಾಮಿ, ‘ನಂಜೇಗೌಡ ಗೂಂಡಾ. ಗುಂಪುಕಟ್ಟಿಕೊಂಡು ಬಂದಿದ್ದಾನೆ’ ಎಂದು ವಾಗ್ದಾಳಿ ನಡೆಸಿದರು.