ಚಿಕ್ಕಬಳ್ಳಾಪುರ: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ನಾಲ್ಕು ತಿಂಗಳು ಕಳೆದಿವೆ. ಚಾರ್ಜ್ಶೀಟ್ ಸಲ್ಲಿಕೆ ಬಳಿಕ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಅವರು ಜಾಮೀನಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಲೇ ಬಂದಿದ್ದರು. ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ಜಾಮೀನು ಕೊಡಲು ನಿರಾಕರಿಸಿದೆ. ಇದರ ಬೆನ್ನಲ್ಲೇ ಕೋಡಿಮಠದ ಶ್ರೀಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಟ ದರ್ಶನ ತೂಗುದೀಪ ಬಗ್ಗೆ ಮಾರ್ಮಿಕವಾಗಿ ಭವಿಷ್ಯವನ್ನು ನುಡಿದಿದ್ದಾರೆ. ಮಾಡಿದ ಪಾಪವನ್ನು ಅನುಭವಿಸಲೇಬೇಕು ಎಂದು ಶ್ರೀಗಳು ಹೇಳಿದ್ದಾರೆ.
ಈ ಹಿಂದೆ, ಅತಿವೃಷ್ಟಿ ಇನ್ನೂ ನಿಂತಿಲ್ಲ ಅದರ ಅಬ್ಬರ ಜೋರಾಗಲಿದೆ, ಗುಡ್ಡಗಳು ಕುಸಿಯಲಿವೆ ಎಂದು ಶ್ರೀಗಳು ಹೇಳಿದ್ದರು. ಅದರಂತೆಯೇ, ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಪಕ್ಕದ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಕುಂಭದ್ರೋಣ ಮಳೆಯಾಗುತ್ತಿದೆ. ಇನ್ನು, ಕೇರಳದ ವಯನಾಡ್ ನಲ್ಲಿ ಗುಡ್ಡ ಕುಸಿತದಿಂದ ಸಾಕಷ್ಟು ಸಾವುನೋವು ಆಗಿದ್ದು ಗೊತ್ತೇ ಇದೆ.
ಮುಡಾ ಕೇಸಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಎಫ್ಐಆರ್ ದಾಖಲಾದ ನಂತರ, ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಯಾಗುತ್ತಿದೆ. ಮುಖ್ಯಮಂತ್ರಿಗಳ ಬದಲಾವಣೆ ಎನ್ನುವ ಚರ್ಚೆ ಸದ್ಯ ತಕ್ಕಮಟ್ಟಿಗೆ ಕಮ್ಮಿಯಾಗುತ್ತಿದೆ. ಮುಖ್ಯಮಂತ್ರಿಗಳು ಮತ್ತು ಅವರ ಪತ್ನಿ ಪಾರ್ವತಿಯವರು ಮುಡಾ ನಿವೇಶನವನ್ನು ಹಿಂದಿರುಗಿಸಿದ್ದ ಬಗ್ಗೆ ಮಾರ್ಮಿಕವಾಗಿ ಕೋಡಿಶ್ರೀಗಳು ಹೇಳಿಕೆಯನ್ನು ನೀಡಿದ್ದಾರೆ. ಅವರಿಗೆ ದೈವಬಲವಿಲ್ಲ ಎನ್ನುವ ಮೂಲಕ, ಅವರ ಕುರ್ಚಿ ಅಲುಗಾಡುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗುವಂತೆ ಮಾಡಿದ್ದಾರೆ.
ದುರ್ಯೋಧನ ಗೆಲ್ಲುತ್ತಾನೆ, ಮುಖ್ಯಮಂತ್ರಿಗಳಿಗೆ ನೋವು ಕೊಟ್ಟಾಗಿದೆ. ಅವರ ಪತ್ನಿ ರಂಗ ಪ್ರವೇಶ ಮಾಡಿಯಾಗಿದೆ. ಈ ಮಹಾಭಾರತದಲ್ಲಿ ಮಹಾರಾಜ ಗೆಲ್ಲುತ್ತಾನೆ. ಆದರೆ, ದೈವಬಲ ಈಗ ಇಲ್ಲ. ಇನ್ನೂ ಸ್ವಲ್ಪದಿನ ರಾಜಕೀಯದಲ್ಲಿ ಏರುಪೇರು ನಡೆಯುತ್ತದೆ” ಎಂದು ಕೋಡಿಶ್ರೀಗಳು ಹೇಳಿದ್ದಾರೆ.
ನಟ ದರ್ಶನ್ ವಿಚಾರದಲ್ಲಿ ಪರೋಕ್ಷವಾಗಿ ಮಾತನಾಡಿದ ಕೋಡಿಶ್ರೀಗಳು, ” ಪುಣ್ಯದ ಕೆಲಸ ಮಾಡಲು ಭಯ ಪಡಬಾರದು. ಆದರೆ ಜನರು ಅದಕ್ಕೆ ಭಯವನ್ನು ಪಡುತ್ತಿದ್ದಾರೆ. ಪಾಪದ ಪಾಷಣ ಕಳೆಯಬೇಕಿದೆ, ಮಾಡಿದ ಕರ್ಮ ಫಲವತ್ತಾದರೆ ಯಾರೇನು ಮಾಡುವರು. ಪಾಪದ ಕೆಲಸ ಮಾಡುವುದಕ್ಕೆ ಹೆದರಬೇಕಿತ್ತು” ಎಂದು ಶ್ರೀಗಳು ಹೇಳಿದ್ದಾರೆ.