ಪ್ರತಿಯೊಬ್ಬರಿಗೂ ತಮ್ಮ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸಬೇಕೆಂಬ ಕನಸು ಇದ್ದೇ ಇರುತ್ತದೆ. ಅದು ಸೆಲೆಬ್ರಿಟಿಯಾಗಲಿ ಅಥವಾ ಸಾಮಾನ್ಯ ವ್ಯಕ್ತಿಯಾಗಲಿ. ಹೀಗಾಗಿ ಮಕ್ಕಳ ಶಿಕ್ಷಣಕ್ಕಾಗಿ ಎಷ್ಟೇ ಹಣ ಖರ್ಚಾದರೂ ಪರ್ವಾಗಿಲ್ಲ. ತಮ್ಮ ಮಕ್ಕಳು ಗುಣಮಟ್ಟ ಶಿಕ್ಷಣ ಪಡೆಯಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಲಕ್ಷಲಕ್ಷ ಖರ್ಚು ಮಾಡುತ್ತಾರೆ. ಇನ್ನು, ಸೆಲೆಬ್ರಿಟಿ ಮಕ್ಕಳಾದರಂತೂ ಕೇಳುವ ಮಾತೇ ಇಲ್ಲ. ಅವರು ಸಾಮಾನ್ಯ ಶಾಲೆಯಲ್ಲಿ ಓದೋಕೆ ಸಾಧ್ಯವಿಲ್ಲ. ಹೀಗಾಗಿ, ಪ್ರತಿಷ್ಠಿತ ಸ್ಕೂಲ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾದರೆ ಬಾಲಿವುಡ್ ತಾರೆಯರ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ ಮಕ್ಕಳ ಶಿಕ್ಷಣಕ್ಕೆ ವರ್ಷಕ್ಕೆ ಎಷ್ಟು ಹಣ ಖರ್ಚು ಮಾಡುತ್ತಾರೆ ಎಂಬುವುದನ್ನು ತಿಳಿಯಲು ಈ ಸುದ್ದಿ ಪೂರ್ತಿ ಓದಿ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬಾಲಿವುಡ್ ತಾರೆಯರ ತಮ್ಮ ಮಕ್ಕಳನ್ನು ಧೀರೂಭಾಯಿ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್ಗೆ ಕಳುಹಿಸುತ್ತಿದ್ದಾರೆ. ಈ ಶಾಲೆ ಮುಂಬೈನ ಬಾಂದ್ರಾದಲ್ಲಿ ಇದೆ.
ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯಾ ಬಚ್ಚನ್, ಶಾರುಖ್ ಖಾನ್ ಅವರ ಕಿರಿಯ ಮಗ ಅಬ್ರಾಮ್ ಖಾನ್, ಹೃತಿಕ್ ರೋಷನ್ ಮತ್ತು ಸುಸಾನೇ ಖಾನ್ ಅವರ ಇಬ್ಬರು ಪುತ್ರರಾದ ಹೃಹಾನ್ ಮತ್ತು ಹೃದಾನ್ ರೋಷನ್, ಆಮಿರ್ ಖಾನ್ ಅವರ ಪುತ್ರ ಆಜಾದ್, ಶಿಲ್ಪಾ ಶೆಟ್ಟಿ ಅವರ ಪುತ್ರ ವಿವಾನ್, ಫರಾ ಖಾನ್ ಅವರ ಮೂವರು ಮಕ್ಕಳು ಸೇರಿ ಅನೇಕ ಸೆಲೆಬ್ರಿಟಿ ಕಿಡ್ಗಳು ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಈಗಾಗಲೇ ಬೆಳೆದು ನಿಂತ ಅನೇಕ ಸೆಲೆಬ್ರಿಟಿ ಮಕ್ಕಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ. ಶಾರುಖ್ ಖಾನ್ ಅವರ ಹಿರಿಯ ಮಗ ಆರ್ಯನ್ ಖಾನ್ ಮತ್ತು ಮಗಳು ಸುಹಾನಾ ಖಾನ್, ಕರಿಷ್ಮಾ ಕಪೂರ್ ಅವರ ಮಗ ಕಿಯಾನ್ ರಾಜ್ ಕಪೂರ್ ಮತ್ತು ಮಗಳು ಸಮೈರಾ, ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್, ಬೋನಿ ಕಪೂರ್ ಪುತ್ರಿ ಖುಷಿ ಕಪೂರ್, ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ, ಅಜಯ್ ದೇವಗನ್ ಮಗಳು ನಿಸಾ ದೇವಗನ್ ಸೇರಿ ಅನೇಕ ಸ್ಟಾರ್ ಮಕ್ಕಳು ಅಂಬಾನಿ ಶಾಲೆಯಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ಧೀರೂಭಾಯಿ ಅಂಬಾನಿ ಶಾಲೆ ವಿಶ್ವದ ಟಾಪ್ 10 ಶಾಲೆಗಳಲ್ಲಿ ಒಂದಾಗಿದೆ. ಶಾಲೆಯಲ್ಲಿ ಪ್ರತಿ 10 ವಿದ್ಯಾರ್ಥಿಗಳಿಗೆ 1 ಶಿಕ್ಷಕರಿದ್ದಾರೆ. ಇಲ್ಲಿ ಅಧ್ಯಯನ ಮಾಡಿದರೆ ಭವಿಷ್ಯದಲ್ಲಿ ಸುಲಭವಾಗಿ ವಿದೇಶದಲ್ಲಿ ಅಧ್ಯಯನ ಮಾಡುವ ರೀತಿಯ ವ್ಯವಸ್ಥೆ ಇಲ್ಲಿದೆ. ಈ ಕಾರಣಕ್ಕೆ ಇಲ್ಲಿ ಹೆಚ್ಚಿನ ಪ್ರವೇಶ ಶುಲ್ಕ ಪಡೆಯಲಾಗುತ್ತದೆ.
ಈ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ 1ರಿಂದ 1.5 ಲಕ್ಷ ರೂ. ಇದೆ ಎನ್ನಲಾಗಿದೆ. ಪ್ರೌಢ ಶಿಕ್ಷಣ 8ರಿಂದ 10ನೇ ತರಗತಿವರೆಗೆ ಸುಮಾರು 4ರಿಂದ 5 ಲಕ್ಷ ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿದು ಬಂದಿದೆ.