ಪ್ರತಿಯೊಬ್ಬರೂ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲೇ ಬೇಕಾಗಿರುವ ಕಾರಣ ಈ ಸಮಯದಲ್ಲಿ ಅಸ್ತಮಾದಿಂದಾಗಿ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಮೊದಲೇ ಕೊರೋನಾದ ಭಯವೂ ಜನರನ್ನು ಕಾಡುತ್ತಿದೆ. ಹೀಗಿರುವಾಗ ಅಸ್ತಮಾ ಕಾಣಿಸಿಕೊಂಡರೆ ಇನ್ನಷ್ಟು ಭಯಭೀತರಾಗುವುದು ಸಹಜ ಹೀಗಾಗಿ ಮೊದಲೇ ಅಸ್ತಮಾದಿಂದ ಬಳಲುತ್ತಿರುವವರು ಈ ಸಮಯದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು ಬಲು ಅಗತ್ಯವಾಗಿದೆ. ಇನ್ನು ಅಸ್ತಮಾ ಎನ್ನುವುದು ಚಿಕ್ಕವರಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನು ಕಾಡುವ ರೋಗ. ಹೀಗಾಗಿ ನಾವೆಷ್ಟು ಎಚ್ಚರಿಕೆಯಿಂದ ಇರುತ್ತೇವೆಯೋ ಅಷ್ಟೇ ಒಳ್ಳೆಯದು.
ಅಸ್ತಮಾ ಕುರಿತಂತೆ ವೈದ್ಯರು ನೀಡುವ ಸಲಹೆ ಪಾಲಿಸುವುದು ಅಗತ್ಯ. ಯಾವ ಸಂದರ್ಭದಲ್ಲಿ ಮತ್ತು ಯಾವುದರಿಂದ ಅಸ್ತಮಾ ಉಲ್ಭಣಗೊಳ್ಳುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಂಡು ಅದರಿಂದ ದೂರವಿರುವಂತೆ ನೋಡಿಕೊಳ್ಳಬೇಕು. ಮನೆಯಿಂದ ಹೊರಗೆ ಹೋಗುವಾಗ ವೈದ್ಯರು ನೀಡುವ ತ್ವರಿತ ಶಮನ ನೀಡುವ ಔಷಧಿ ಮತ್ತು ಇನ್ನೇಲರ್ ಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಹೊಗೆ, ಧೂಳಿನಿಂದ ಆದಷ್ಟು ದೂರ ಇರುವಂತೆ ನೋಡಿಕೊಳ್ಳಬೇಕು.
ಮಲಗುವ ಕೋಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಜತೆಗೆ ಒಂದಷ್ಟು ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಬೂಷ್ಟ್ ಮತ್ತು ಧೂಳು ರಗ್ಗುಗೆ ಹಿಡಿಯುವುದರಿಂದ ಅದನ್ನು ದೂರವಿಟ್ಟು, ಸ್ವಚ್ಛವಾಗಿರುವ ಹೊದಿಕೆಗಳನ್ನು ಬಳಸಬೇಕು. ಮಲಗುವ ಕೋಣೆಯಲ್ಲಿರುವ ಮಂಚದ ಹಾಸಿಗೆ, ದಿಂಬು, ಕುರ್ಚಿ, ಇನ್ನಿತರ ಪೀಠೋಪಕರಣಗಳಲ್ಲಿ ಧೂಳುಗಳು ಶೇಖರಣೆಯಾಗುತ್ತವೆ. ಹೀಗಾಗಿ ಇವುಗಳನ್ನು ನಿತ್ಯ ಸ್ವಚ್ಛಗೊಳಿಸಬೇಕು. ಬೆಕ್ಕು, ನಾಯಿಗಳನ್ನು ಜತೆಯಲ್ಲಿ ಮಲಗಿಸಿಕೊಳ್ಳುವುದು ಒಳ್ಳೆಯದಲ್ಲ. ಮಲಗುವ ಕೋಣೆಯಲ್ಲಿ ಧೂಮಪಾನ ಇನ್ನಿತರ ಹೊಗೆ ಬರದಂತೆ ನೋಡಿಕೊಳ್ಳಬೇಕು. ಬಟ್ಟೆಗಳನ್ನು ಬಿಸಿ ನೀರಿನಿಂದ ತೊಳೆಯಬೇಕು.
ಮನೆಯಲ್ಲಿ ಕಸ ಗುಡಿಸುವುದು, ವ್ಯಾಕ್ಯೂಮ್ ಮಾಡುವುದು, ಧೂಳು ತೆಗೆಯುವುದು, ಪೇಯಿಂಟ್ ಮಾಡುವುದು, ಕೀಟಗಳಿಗೆ ಸ್ಪ್ರೇ ಮಾಡುವುದು, ಇನ್ನಿತರ ತೀಕ್ಷ್ಣ ಕಾರಕ ಆಹಾರ ಪದಾರ್ಥಗಳನ್ನು ಬೇಯಿಸುವುದು, ಒಗ್ಗರಣೆ ಹಾಕುವುದು ಮೊದಲಾದವುಗಳನ್ನು ಅಸ್ತಮಾ ಪೀಡಿತರು ಮಾಡಬಾರದು, ಪೀಡಿತರು ಮನೆಯಲ್ಲಿದ್ದಾಗಲೂ ಮಾಡಬಾರದು.
ಮೂರು ಬಾರಿ ಲಘು ಆಹಾರ ಸೇವಿಸುವುದು, ಹಣ್ಣು ಹಂಪಲುಗಳನ್ನು ಸೇವಿಸಬೇಕು. ಸದಾ ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು. ಅಸ್ತಮಾ ಇರುವವರು ನಿರ್ಲಕ್ಷ್ಯ ತೋರಬಾರದು. ವೈದ್ಯರು ನೀಡಿದ ಔಷಧಿಗಳನ್ನು ತೆಗೆದುಕೊಳ್ಳಬೇಕು. ಅಸ್ತಮಾವನ್ನು ನಿಯಂತ್ರಿಸುವ ಔಷಧಿಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕು, ಧೂಮಪಾನ, ಅತಿಯಾದ ಆಹಾರಸೇವನೆ ಒಳ್ಳೆಯದಲ್ಲ. ಅಲರ್ಜಿ ಉಂಟು ಮಾಡುವ ಆಹಾರಗಳಿಂದ ದೂರವಿದ್ದಷ್ಟು ಒಳ್ಳೆಯದು. ಹಾಲಿನ ಉತ್ಪನ್ನಗಳು, ಚಾಕೋಲೆಟ್, ರಿಫೈನ್ಡ್ ವೈಟ್ ಫ್ಲೋರ್, ಬ್ರೆಡ್, ಕೇಕ್, ಸಕ್ಕರೆ ಮುಂತಾದ ಆಹಾರ ಪದಾರ್ಥಗಳಿಂದ ದೂರವಿರಬೇಕು.
ವೈದ್ಯರ ಸೂಚನೆಯಂತೆ ಔಷಧಿಯನ್ನು ಸೇವಿಸಬೇಕೇ ವಿನಃ ಸ್ವಯಂ ಔಷಧೋಪಚಾರ ಒಳ್ಳೆಯದಲ್ಲ. ಹೆಣ್ಣು ಮಕ್ಕಳು ಸ್ನಾನದ ಬಳಿಕ ತೇವಯುಕ್ತ ಕೂದಲನ್ನು ಚೆನ್ನಾಗಿ ಟವೆಲ್ನಿಂದ ಒರೆಸಿ ತೇವ ತೆಗೆಯಬೇಕು. ಕೂದಲಿನಲ್ಲಿ ತೇವದ ಅಂಶ ನಿಲ್ಲದಂತೆ ನೋಡಿಕೊಳ್ಳಬೇಕು