ಹೊಸ ವರ್ಷದಲ್ಲಿ ವಿವಿಧ ಕಾರು ಕಂಪನಿಗಳು ತಮ್ಮ ಬಹುನೀರಿಕ್ಷಿತ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿವೆ. ಇದೇ ವೇಳೆ ಮಾರುಕಟ್ಟೆಯಲ್ಲಿರುವ ಕೆಲವು ಕಾರುಗಳು ಮಾರುಕಟ್ಟೆಯಿಂದ ನಿರ್ಗಮಿಸಲು ಸಿದ್ದವಾಗಿದ್ದು, ಇನ್ಮುಂದೆ ಈ ಕಾರುಗಳು ಗ್ರಾಹಕರಿಗೆ ಖರೀದಿಗೆ ಲಭ್ಯವಿರುವುದಿಲ್ಲ ಎನ್ನಬಹುದು. ಹಾಗಾದ್ರೆ ಮಾರುಕಟ್ಟೆಯಿಂದ ಈ ವರ್ಷ ನಿರ್ಗಮಿಸುತ್ತಿರುವ ಕಾರುಗಳು ಯಾವುವು? ನಿರ್ಗಮನಕ್ಕೆ ಕಾರಣವೇನು? ಈ ಎಲ್ಲಾ ಮಾಹಿತಿ ಇಲ್ಲಿದೆ.
ಪ್ರಸ್ತುತ ಕಾರು ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆ ಆಧರಿಸಿ ಹಲವಾರು ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಹಳೆಯ ಆವೃತ್ತಿಗಳ ಮಾರಾಟವನ್ನು ಸ್ಥಗಿತಗೊಳಿಸಿ ಹೊಸ ಆವೃತ್ತಿಗಳ ಬಿಡುಗಡೆ ಮಾಡಲಾಗುತ್ತಿದೆ. ಸ್ಥಗಿತಗೊಳ್ಳುವ ಕಾರುಗಳಲ್ಲಿ ಮಾರುತಿ ಸುಜುಕಿ, ಮಹೀಂದ್ರಾ, ಹೋಂಡಾ, ನಿಸ್ಸಾನ್, ಸ್ಕೋಡಾ ಮತ್ತು ಕಿಯಾ ಕಾರುಗಳು ಹೆಚ್ಚಿನ ಸಂಖ್ಯೆಯಲಿದ್ದು, ಸ್ಥಗಿತಗೊಳ್ಳಲಿರುವ ಹಳೆಯ ಕಾರುಗಳಲ್ಲಿ ಕೆಲವು ಕಾರುಗಳಲ್ಲಿ ಮಾತ್ರ ಹೊಸ ಆವೃತ್ತಿಯನ್ನು ಪರಿಚಯಿಸಲಾಗುತ್ತಿದೆ.
ಮಾರುತಿ ಆಲ್ಟೊ 800
ಅತಿ ಕಡಿಮೆ ಬೆಲೆಯ ಕಾರುಗಳಲ್ಲಿ ಪ್ರಮುಖ ಆವೃತ್ತಿಯಾಗಿದ್ದ ಮಾರುತಿ ಸುಜುಕಿ ಐಕಾನಿಕ್ ಕಾರು ಮಾದರಿಯಾದ ಆಲ್ಟೊ 800 ಮಾದರಿಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಇದು ತ್ರಿ ಸಿಲಿಂಡರ್ 796 ಸಿಸಿ ಎಂಜಿನ್ ಹೊಂದಿತ್ತು. ಈ ವರ್ಷದ ಏಪ್ರಿಲ್ ನಲ್ಲಿ ಜಾರಿಗೆ ಬಂದ ರಿಯಲ್ ಡ್ರೈವ್ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಆಲ್ಟೊ 800 ಮಾರಾಟ ಸ್ಥಗಿತಗೊಳಿಸಿದ ಮಾರುತಿ ಸುಜುಕಿ ಕಂಪನಿಯು ಕೇವಲ K10 ಸರಣಿ ಮಾದರಿಯ ಮೇಲೆ ಗಮನಹರಿಸುತ್ತಿದೆ.
ಮಹೀಂದ್ರಾ ಕೆಯುವಿ100 ನೆಕ್ಸ್ಟ್
ಮಹೀಂದ್ರಾ ಕಂಪನಿಯ ಅತ್ಯಂತ ಕೈಗೆಟುಕುವ ಕಾರು ಮಾದರಿಯಾಗಿದ್ದ ಕೆಯುವಿ100 ನೆಕ್ಸ್ಟ್ ಮಾದರಿಯನ್ನು ಈ ವರ್ಷದ ಆರಂಭದಲ್ಲಿ ಸ್ಥಗಿತಗೊಳಿಸಲಾಗಿದೆ. ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳಿಗೆ ಅನುವಾಗಿ ಭಾರೀ ಬದಲಾವಣೆ ಅವಶ್ಯಕವಾಗಿದ್ದರಿಂದ ಕೆಯುವಿ100 ನೆಕ್ಸ್ಟ್ ಕಾರನ್ನು ಸ್ಥಗಿತಗೊಳಿಸಿದ ಮಹೀಂದ್ರಾ ಕಂಪನಿಯು ಇದೀಗ ಹೊಸ ತಲೆಮಾರಿನ ಕಾರು ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.
ಹೋಂಡಾ ಜಾಝ್, ಸಿಟಿ, ಡಬ್ಲ್ಯುಆರ್-ವಿ
ಏಪ್ರಿಲ್ 1ರಿಂದ ಜಾರಿಗೆ ಬಂದ ಬಿಎಸ್-6 2ನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡಗಳಿಂದಾಗಿ ಜಾಝ್ ಹ್ಯಾಚ್ ಬ್ಯಾಕ್, ನಾಲ್ಕನೇ ತಲೆಮಾರಿನ ಸಿಟಿ ಸೆಡಾನ್ ಮತ್ತು ಡಬ್ಲ್ಯುಆರ್-ವಿ ಕಾರುಗಳನ್ನು ಹೋಂಡಾ ಕಂಪನಿಯು ಸ್ಥಗಿತಗೊಳಿಸಿದೆ. ಡಬ್ಲ್ಯುಆರ್-ವಿ ಸ್ಥಾನಕ್ಕೆ ಹೊಸ ಎಲಿವೇಟ್ ಬಿಡುಗಡೆ ಮಾಡಲಾಗಿದ್ದು, ಸೆಡಾನ್ ವಿಭಾಗದಲ್ಲಿ 5ನೇ ತಲೆಮಾರಿನ ಸಿಟಿ ಕಾರು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಆದರೆ ಜಾಝ್ ಕಾರಿನ ಸ್ಥಾನಕ್ಕೆ ಹೊಸ ಫೇಸ್ ಲಿಫ್ಟ್ ಆವೃತ್ತಿಯ ಬಿಡುಗಡೆ ಮಾಡಬಹುದಾಗಿದ್ದು, ಇದು ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗಬಹುದಾಗಿದೆ.