ಬಾಂಗ್ಲಾದೇಶ ವಿರುದ್ದ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕನ್ನಡಿಗ ಕೆಎಲ್ ರಾಹುಲ್ ಅವರು ಟೀಕೆಗಳಿಗೆ ಗುರಿಯಾಗಿದ್ದಾರೆ. ಯುವ ಬ್ಯಾಟ್ಸ್ಮನ್ ಸರ್ಫರಾಝ್ ಖಾನ್ ಅವರ ಸ್ಥಾನದಲ್ಲಿ ಆಡಿದ ರಾಹುಲ್, ಪ್ರಥಮ ಇನಿಂಗ್ಸ್ನಲ್ಲಿ ಆರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿದ್ದರು. ಆದರೆ, ಎದುರಿಸಿದ್ದ 52 ಎಸೆತಗಳಲ್ಲಿ ಕೇವಲ 16 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ವಿಕೆಟ್ ಒಪ್ಪಿಸುತ್ತಿದ್ದಂತೆ ಕನ್ನಡಿಗನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅಣಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಇವರು ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಅವರ ಜೊತೆ 48 ರನ್ಗಳ ಜೊತೆಯಾಟವನ್ನು ಆಡಿದ್ದರು. ಜೈಸ್ವಾಲ್ (56 ರನ್) ಅವರು ಟೆಸ್ಟ್ ವೃತ್ತಿ ಜೀವನದಲ್ಲಿ ಐದನೇ ಅರ್ಧಶತಕ ಸಿಡಿಸಿದರು. ಅಂದ ಹಾಗೆ ಕೆಎಲ್ ರಾಹುಲ್ ಅವರು ಸ್ಟ್ರೈಕ್ ರೊಟೇಟ್ ಮಾಡುವಲ್ಲಿಯೂ ಎಡವಿದ್ದರು.
ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದ ಬಳಿಕ ಅಭಿಮಾನಿಗಳು ಬಲಗೈ ಬ್ಯಾಟ್ಸ್ಮನ್ ಅನ್ನು ಆಯ್ಕೆ ಮಾಡಿದ ಟೀಮ್ ಮ್ಯಾನೇಜ್ಮೆಂಟ್ ವಿರುದ್ದ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಯುವ ಬ್ಯಾಟರ್ ಸರ್ಫರಾಝ್ ಖಾನ್ ಅವರನ್ನೇ, ಕೆಎಲ್ ರಾಹುಲ್ ಬದಲು ಆಡಿಸಬೇಕಾಗಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.