ಟೀಮ್ ಇಂಡಿಯಾದ ಮಾಜಿ ನಾಯಕ, ಸ್ಟಾರ್ ಬ್ಯಾಟರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು, ಅದ್ಭುತ ಕ್ಯಾಚ್ ಹಿಡಿದು ವಿಶೇಷ ದಾಖಲೆ ಬರೆದಿದ್ದಾರೆ.
ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಎರಡು ಕ್ಯಾಚ್ಗಳನ್ನು ಹಿಡಿದಿದ್ದಾರೆ. ಈ ಕ್ಯಾಚ್ಗಳೊಂದಿಗೆ ಕಿಂಗ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲು ದಾಟಿದ್ದಾರೆ. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
ಈ ಪಂದ್ಯದ 19ನೇ ಓವರ್ನ 3ನೇ ಎಸೆತದಲ್ಲಿ ನಾಥನ್ ಮೆಕ್ಸ್ವೀನಿ ಸ್ಲಿಪ್ನಲ್ಲಿ ನೀಡಿದ ಕ್ಯಾಚ್ ಅನ್ನು ವಿರಾಟ್ ಕೊಹ್ಲಿ ಅತ್ಯಂತ ಸುಲಭವಾಗಿ ಹಿಡಿದರು. ಇನ್ನು 34ನೇ ಓವರ್ನ 2ನೇ ಎಸೆತದಲ್ಲಿ ಮಾರ್ನಸ್ ಲಾಬುಶೇನ್ ಕ್ಯಾಚ್ ನೀಡಿದ್ದರು. ಸೆಕೆಂಡ್ ಸ್ಲಿಪ್ನತ್ತ ತೂರಿ ಬಂದ ಚೆಂಡನ್ನು ಕ್ಷಣಾರ್ಧದಲ್ಲಿ ಅದ್ಭುತವಾಗಿ ಹಿಡಿಯುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾದರು.
ಈ ಎರಡು ಕ್ಯಾಚ್ಗಳೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಕ್ಯಾಚ್ ಹಿಡಿದ ಭಾರತೀಯ ಫೀಲ್ಡರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ 3ನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿದ್ದರು.