ಗದಗ: ಇಲ್ಲಿನ ದಾಸರ ಓಣಿಯಲ್ಲಿ ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆಯಾಗಿರುವ ಘಟನೆ ನಡೆದಿದ್ದು, ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಗದಗ ಜಿಲ್ಲೆಯ ಬೇಟಗೇರಿ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಹತ್ಯೆಯಾಗಿದೆ.
ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55) ಪತ್ನಿ ಲಕ್ಷ್ಮಿ (45), ಪುತ್ರಿ ಆಕಾಂಕ್ಷಾ (16) ಕೊಲೆಯಾಗಿದ್ದಾರೆ. ಕೊಲೆ ಮಾಡಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮೃತ ನಾಲ್ವರ ಪೈಕಿ ಮೂವರು ದಾಸರ ಓಣಿಯಲ್ಲಿ ತಮ್ಮ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದರು. ಈ ಮೂವರು ಮೂಲತಃ ಕೊಪ್ಪಳ ಜಿಲ್ಲೆಯವರು. ಏಪ್ರಿಲ್ 17 ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ನ ಮದುವೆ ಸಹ ನಡೆದಿತ್ತು. ವಿವಾಹ ಕಾರ್ಯಕ್ರಮಕ್ಕಾಗಿ ಸಂಬಂಧಿಕರು ಆಗಮಿಸಿದ್ದರು ಎಂದು ಹೇಳಲಾಗಿದೆ.
ಸದ್ಯ ಸ್ಥಳಕ್ಕೆ ಶ್ವಾನದಳ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಬಿ.ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.