ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಆಯೋಜಿಸಿದ್ದು ಈ ವೇಳೆ ಸುದೀಪ್ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಅಲ್ಲದೆ ‘ಮ್ಯಾಕ್ಸ್’ ಸಿನಿಮಾ ಯಶಸ್ಸು ಕಂಡ ಬಳಿಕ ಕತ್ತರಿಸಿದ ಕೇಕ್ನಲ್ಲಿ ‘ಬಾಸಿಸಂ ಕಾಲ ಮುಗಿಯಿತು’ ಎಂದು ಬರೆದಿದ್ದು ಅನೇಕರ ಕಣ್ಣು ಕುಕ್ಕಿದ್ದು ಈ ವಿಚಾರದ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ.
‘ಯಶ್, ದರ್ಶನ್, ಧ್ರುವ, ಉಪ್ಪಿ, ಶಿವಣ್ಣ ಎಲ್ಲರೂ ಸೇರಿದರೆ ಕನ್ನಡ ಚಿತ್ರರಂಗ. ದರ್ಶನ್ ಫ್ಯಾನ್ಸ್ ವಿಷಯ ಬಂದಾಗ ನಾನೇ ಹೇಳಿದ್ದೆ. ದರ್ಶನ್ ಫ್ಯಾನ್ಸ್ಗೆ ಬೈಯ್ಯಬೇಡಿ. ಅವರು ನೋವಲ್ಲಿ ಇದ್ದಾರೆ. ಇದನ್ನು ನಾನೇ ಹೇಳಿದ ಮೇಲೆ ನಾವು ಯಾಕೆ ಅವರಿಗೆ ಟಾಂಟ್ ಕೊಡೋಣ? ನಾವೆಲ್ಲ ಬಹಳ ಚಿಕ್ಕವರು. ಇಂದು ಚಿತ್ರರಂಗ ಕೊರಗುತ್ತಿದೆ. ನಾವೆಲ್ಲ ಸಿನಿಮಾವನ್ನು ಉಳಿಸೋಕೆ ಹೋಗೋಣವೋ ಅಥವಾ ಈ ಥರದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಕೂರೋಣವಾ ಹೇಳಿ’ ಎಂದು ಸುದೀಪ್ ಪ್ರಶ್ನೆ ಮಾಡಿದರು.
‘ನಾವು ಯಾಕೆ ಟಾಂಟ್ ಕೊಡಬೇಕು? ಏನು ಸಿಗುತ್ತೆ ನಮಗೆ ಅದರಿಂದ? ನಾವೇನು ಚತ್ರಪತಿಗಳ? ಚಕ್ರವರ್ತಿಗಳಾ? ವಯಸ್ಸಾಗಿ ನಾವು ಕೂಡ ಹೋಗುವವರೇ ಒಂದು ದಿನ. ಬದುಕಿರುವಾಗ, ಒಂದು ಸಿನಿಮಾ ನಮ್ಮ ಕೈ ಹಿಡಿದಿರುವಾಗ ಬೆಳೆಯೋಣ, ಇನ್ನಷ್ಟು ಆಸೆಪಡೋಣ. ಒಳ್ಳೆಯ ಸಿನಿಮಾ ಮಾಡೋಣ. ಎಲ್ಲರೂ ನನ್ನ ಸಹೋದರನ ರೀತಿ ಇದ್ದೋರು’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
‘ಅಭಿಮಾನಿಗಳು ಯಶ್ ಬಾಸ್, ಧ್ರುವ ಬಾಸ್, ಉಪ್ಪಿ ಬಾಸ್, ಶಿವಣ್ಣ ಬಾಸ್ ಅನ್ನೋದಿಲ್ವಾ? ಎಲ್ಲರಿಗೂ ಅವರವರ ಅಭಿಮಾನಿಗಳು ಹಾಗೆಯೇ ಕರೆಯುತ್ತಾರೆ. ನನಗೂ ದರ್ಶನ್ಗೂ ಏನೂ ಇಲ್ಲ. ಅವರು ಕೂಡ ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಪ್ರತಿಯೊಬ್ಬರೂ ಕಷ್ಟಪಟ್ಟಿದ್ದಾರೆ. ಕನ್ನಡ ಚಿತ್ರರಂಗ ಇಂದು ತುಂಬ ನೋವಲ್ಲಿ ಇದೆ. ಚಿತ್ರರಂಗ ಬೆಳೆಯಬೇಕು ಎಂದರೆ ವಿವಾದ ಬೇಡ’ ಎಂದಿದ್ದಾರೆ ಸುದೀಪ್.
‘ನನ್ನ ಫ್ಯಾನ್ಸ್ ಹೋಗಿ ಎಲ್ಲ ಹೀರೋಗಳ ಸಿನಿಮಾ ನೋಡುತ್ತಾರೆ. ಅವರ ಫ್ಯಾನ್ಸ್ ಬಂದು ನನ್ನ ಸಿನಿಮಾ ನೋಡುತ್ತಾರೆ. ಆನ್ಲೈನ್ನಲ್ಲಿ ಒಂದು ವಾತಾವರಣ ಬೆಳೆಯುವಾಗ ಯಾರೋ ಒಬ್ಬರು ಒಂದು ಆಯಾಮ ಕೊಡುವುದೇ ತಪ್ಪು. ಕೆಟ್ಟ ಅಹಂಕಾರ ನಮ್ಮಲ್ಲಿ ಇದೆ ಅಂತ ನೀವು ಅಂದುಕೊಂಡಿರುವುದೇ ತಪ್ಪು. ನಮ್ಮ ಹಿರಿಯರು ಚಿತ್ರರಂಗವನ್ನು ತಮ್ಮ ಭುಜದಮೇಲೆ ಹೊತ್ತುಕೊಂಡು ಬೆಳೆಸಿದ್ದಾರೆ. ಇವತ್ತು ನಮ್ಮ ಕೈಗೆ ಕೊಟ್ಟಿದ್ದಾರೆ. ನಾನು ಇನ್ನಷ್ಟು ಬೆಳೆಸಿ ಮುಂದಿನ ತಲೆಮಾರಿಗೆ ಕೊಟ್ಟು ಹೋಗಬೇಕು’ ಎಂದು ಸುದೀಪ್ ಹೇಳಿದ್ದಾರೆ.