ಪರ್ಲ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಹರಿಣರ ತಂಡದ ಕೇಶವ್ ಮಹಾರಾಜ್ (Keshav Maharaj) ಕ್ರೀಸ್ಗೆ ಬಂದ ವೇಳೆ ಟೀಂ ಇಂಡಿಯಾ ನಾಯಕ ಕೆ.ಎಲ್ ರಾಹುಲ್ (KL Rahul) ನಡೆಸಿದ ಸಣ್ಣ ಸಂಭಾಷಣೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕೇಶವ್ ಮಹಾರಾಜ್ ಕ್ರೀಸ್ಗೆ ಬಂದಕೂಡಲೇ `ರಾಮ್ ಸಿಯಾ ರಾಮ್ (Ram Siya Ram), ಜೈ ಜೈ ರಾಮ್, ಸೀತಾರಾಮ್’ ಗೀತೆಯನ್ನು ನುಡಿಸಲಾಗಿತ್ತು.
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) ಚೇಸಿಂಗ್ ವೇಳೆ, 33.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿದ್ದಾಗ ಆಲ್ರೌಂಡರ್ ಕೇಶವ್ ಮಹಾರಾಜ್ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದರು. ಕೇಶವ್ ಬರುತ್ತಿದ್ದಂತೆ ಪರ್ಲ್ನ ಬೋಲ್ಯಾಂಡ್ ಪಾರ್ಕ್ ಸ್ಪೀಕರ್ಗಳಲ್ಲಿ `ರಾಮ್ ಸಿಯಾ ರಾಮ್’ ಹಾಡು ಮೊಳಗಿತು. ಭಾರತ ಮೂಲದವರೇ ಆದ ಕೇಶವ್ ಮಹಾರಾಜ್ ದೈವಭಕ್ತ ಎಂಬುದು ಹೊಸ ವಿಷಯವೇನಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಅವರಿಗೊಪ್ಪುವ ಹಾಡನ್ನೇ ಅವರ ಎಂಟ್ರಿ ವೇಳೆ ಪ್ರಸಾರ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ವಿಕೆಟ್ ಕೀಪರ್ ಆಗಿದ್ದ ಟೀಂ ಇಂಡಿಯಾ ನಾಯಕ ಕೆ.ಎಲ್ ರಾಹುಲ್, ಈ ಹಾಡನ್ನು ಆಲಿಸಿ ವಿಷಯವೊಂದನ್ನು ಗಮನಿಸಿದ್ದಾರೆ. ಕೇಶವ್ ಮಹಾರಾಜ್ ಪ್ರತಿ ಬಾರಿ ಬ್ಯಾಟಿಂಗ್ಗೆ ಕಾಲಿಟ್ಟಾಗಲೆಲ್ಲಾ ಈ ಹಾಡನ್ನೇ ನುಡಿಸುತ್ತಾರೆ ಎಂಬುದು ಅವರಿಗೆ ಗೊತ್ತಾಗಿದೆ. ಹೀಗಾಗಿ ರಾಹುಲ್ ಮುಗುಳ್ನಗುವಿನೊಂದಿಗೆ ಕೇಶವ್ ಮಹಾರಾಜ್ ಬಳಿಯೇ ಈ ಪ್ರಶ್ನೆ ಕೇಳಿದ್ದಾರೆ. ಕೇಶವ್ ಕೂಡ ನಗುತ್ತಲೇ ಹೌದು. ಪ್ರತಿಬಾರಿ ಕ್ರೀಸ್ಗೆ ಬರುವಾಗ ಈ ಗೀತೆಯನ್ನ ಪ್ರಸಾರ ಮಾಡಲಾಗುತ್ತೆ ಎಂಬುದನ್ನ ಒಪ್ಪಿಕೊಂಡಿದ್ದಾರೆ. ಸದ್ಯ ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.