ದೆಹಲಿ: ದೆಹಲಿಯ (Delhi) ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಫ್ಲಾಗ್ಸ್ಟಾಫ್ ರಸ್ತೆಯ ಸರ್ಕಾರಿ ನಿವಾಸವನ್ನು ತೆರವು ಮಾಡಿ ದೆಹಲಿ ಲುಟ್ಯೆನ್ಸ್ ವಲಯದಲ್ಲಿರುವ ತಮ್ಮ ಪಕ್ಷದ (Aam Aadmi Party) ನಾಯಕ ಅಶೋಕ್ ಮಿತ್ತಲ್ ಅವರ ಮನೆಗೆ ತೆರಳಿದ್ದಾರೆ.
ಕೇಜ್ರಿವಾಲ್ ತಮ್ಮ ಪೋಷಕರು, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮನೆಯಿಂದ ತೆರಳಿದ್ದಾರೆ. ತೆರಳುವ ಮುನ್ನ ಮನೆಯ ಕೆಲಸದ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಅವರ ಕುಟುಂಬವು ಮಂಡಿ ಹೌಸ್ ಬಳಿಯ ಫಿರೋಜ್ಶಾ ರಸ್ತೆಯಲಿರುವ ಪಕ್ಷದ ಸದಸ್ಯ, ಅಶೋಕ್ ಮಿತ್ತಲ್ ಅವರ ಅಧಿಕೃತ ನಿವಾಸಕ್ಕೆ ತೆರಳಿತು. ಮಿತ್ತಲ್ ಅವರು ಪಂಜಾಬ್ನ ಸಂಸದರಾಗಿದ್ದಾರೆ.
ಗುರುವಾರದಿಂದ ಆರಂಭವಾದ ಮಂಗಳಕರ ನವರಾತ್ರಿ ಅವಧಿಯಲ್ಲಿ ಮುಖ್ಯಮಂತ್ರಿ ನಿವಾಸವನ್ನು ಖಾಲಿ ಮಾಡುವುದಾಗಿ ಅವರು ಈ ಹಿಂದೆ ಹೇಳಿದ್ದರು.
ಕೇಜ್ರಿವಾಲ್ ಕಳೆದ ತಿಂಗಳು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆ ಫೆಬ್ರವರಿಯಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ದೆಹಲಿಯ ಜನರಿಂದ ʻಪ್ರಾಮಾಣಿಕತೆಯ ಪ್ರಮಾಣಪತ್ರʼ ಪಡೆದ ನಂತರವೇ ಮತ್ತೆ ಹುದ್ದೆಯನ್ನು ಅಲಂಕರಿಸುವುದಾಗಿ ಅವರು ಘೋಷಿಸಿದ್ದರು.