ಬೆಂಗಳೂರು: ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಪರ್ಣಾ (kannada anchor aparna) ಅವರಿಂದು ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ʻಮಸಣದ ಹೂವುʼ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ ಅಪರ್ಣಾ ಅವರು ಹಿಂದಿರುಗಿ ನೋಡಿರಲಿಲ್ಲ. ನಟನೆ, ನಿರೂಪಣೆ, ಕಿರುತೆರೆಯಲ್ಲಿ ಅವರು ಮಿಂಚಿದ್ದರು. ಅವರಿಂದು ತಮ್ಮ ಮಾತುಗಳಿಗೆ ಪೂರ್ಣ ವಿರಾಮವನ್ನಿಟ್ಟಿದ್ದಾರೆ.
ಅಪರ್ಣಾ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯಮಾನ್ಯರು ಸಂತಾಪ ಸೂಚಿಸಿದ್ದಾರೆ. ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದ, ಖ್ಯಾತ ನಿರೂಪಕಿ, ನಟಿ ಶ್ರೀಮತಿ ಅಪರ್ಣ ಅವರ ಸಾವಿನಿಂದ ಮನಸ್ಸಿಗೆ ಅಪಾರ ನೋವುಂಟಾಗಿದೆ. ಅವರ ನಿಧನವು ಕಲಾ ಲೋಕಕ್ಕೆ ತುಂಬಲಾರದ ನಷ್ಟ. ನಿರೂಪಕಿಯಾಗಿ, ನಟಿಯಾಗಿ ದಶಕಗಳಿಂದ ದುಡಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಸಾಂತ್ವನಗಳು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಕನ್ನಡ ನಾಡು ಒಬ್ಬ ಸಜ್ಜನಿಕೆಯ ನಿರೂಪಕಿಯನ್ನು ಕಳೆದುಕೊಂಡಂತಾಗಿದೆ ಅಂತಾ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ್ ಬೊಮ್ಮಾಯಿ ಪೋಸ್ಟ್ ಮಾಡಿದ್ದಾರೆ. ಇನ್ನೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್.. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಮ್ಮ ಟ್ವಿಟರ್ ಖಾತೆಯಲ್ಲಿ ಸಂತಾಪವನ್ನ ಸೂಚಿಸಿದ್ದಾರೆ.
ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಮ್ ಮಾತನಾಡಿ ಅಪರ್ಣಾ ಕೆಲಸದ ಬಗ್ಗೆ ಕೆಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಬಸ್ ನಿಲ್ದಾಣಕ್ಕೆ ಹೋದರೆ, ಏರ್ಪೋರ್ಟ್ಗೆ ಹೋದರೆ, ಮೆಟ್ರೋ ನಿಲ್ದಾಣಕ್ಕೆ ಹೋದರೆ, ರೈಲ್ವೇ ನಿಲ್ದಾಣಕ್ಕೆ ಹೋದರೆ.. ಎಲ್ಲಿ ಹೋದರೂ ಅವರ ಕನ್ನಡದ ಧ್ವನಿ ಇರುತ್ತಿತ್ತು. ಅವರು ಕನ್ನಡದ ಮೇಲೆ ಪ್ರೀತಿ ಬರುವ ಹಾಗೆ ಮಾಡುವವರು. ಅಯ್ಯೋ ಇದು ನಮ್ಮ ಕನ್ನಡ ಅನ್ನೋ ರೀತಿ ಮಾಡೋರು. ಅದು ಕೇವಲ ಮೆಕಾನಿಕ್ ಆಗಿ ಅಲ್ಲ. ಅನೇಕ ಕಲಾವಿದರೂ ಕೂಡ ಕನ್ನಡದ ಬಗ್ಗೆ ಪ್ರೀತಿ ಹುಟ್ಟಿಸಿದ್ದಾರೆ. ಅಂತವರಲ್ಲಿ ಅಪರ್ಣ ಕೂಡ ಒಬ್ಬರು. ಆದರೆ ಅವರು ಚಿಕ್ಕ ವಯಸ್ಸಿನಲ್ಲಿಯೇ ಹೋಗಿ ಬಿಡ್ತಾರೆ. ತುಂಬಾ ನೋವಿನ ವಿಚಾರ ಎಂದು ಟಿ.ಎನ್.ಸೀತಾರಾಮ್ ಭಾವುಕರಾಗಿದ್ದಾರೆ.