ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಮಗ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಪುತ್ರನ ಹಸ್ತಕ್ಷೇಪ ಹೆಚ್ಚಾಗಿದೆ, ವೈಎಸ್ಟಿ ಸಂಗ್ರಹಿಸುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪದ ಬೆನ್ನಲ್ಲೇ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಂದೆ ಜೊತೆ ಮಾತನಾಡಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಎಕ್ಸ್ನಲ್ಲಿ ಬರೆದಿರುವ ಹೆಚ್ಡಿ ಕುಮಾರಸ್ವಾಮಿ, ಕಾಸಿಗಾಗಿ ಹುದ್ದೆ ಉರುಫ್ ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವೀಡಿಯೋ ತುಣುಕೇ ಸಾಕ್ಷಿ ಎಂದು ಕೆಂಡ ಕಾರಿದ್ದಾರೆ.
ಹೆಚ್ಡಿಕೆ ಟ್ವೀಟ್ನಲ್ಲೇನಿದೆ?
ಕಾಸಿಗಾಗಿ ಹುದ್ದೆ ಉರುಫ್ ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ.
ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ? ಸಾರ್ವಜನಿಕ ಸಭೆಯಲ್ಲೇ ಎಗ್ಗಿಲ್ಲದೆ, ನಾಚಿಕೆ ಮಾನ ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಸುಪುತ್ರ, ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ. ಬೀದಿಯಲ್ಲಿಯೇ ಇಷ್ಟಾದರೆ ನಾಲ್ಕು ಗೋಡೆಗಳ ಮಧ್ಯೆ ಇನ್ನೆಷ್ಟು ವ್ಯವಹಾರ ನಡೆಸುತ್ತಿರಬಹುದು?
ರಾಜ್ಯದ ಮುಖ್ಯಮಂತ್ರಿಗೇ ಧಮ್ಕಿ ಹಾಕಿ, ‘ನಾನು ಹೇಳಿದವರಷ್ಟನ್ನೇ ಮಾಡಿ’ ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ? ಅಥವಾ ಮಿನಿಸ್ಟರ್ ಫಾರ್ ಕ್ಯಾಶ್ ಫಾರ್ ಪೋಸ್ಟಿಂಗಾ? ಇಲ್ಲವೇ ಒಳಾಡಳಿತ ಸಚಿವಾಲಯ ಮಾದರಿಯ ‘ಒಳ ವಸೂಲಿ ಸಚಿವಾಲಯ’ದ ಸಚಿವರಾ?
ಸ್ವತಃ ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಭಾರೀ ಆಸಾಮಿ ಯಾರು? ಇಷ್ಟಕ್ಕೂ ಆ ಮಹದೇವ ಎನ್ನುವ ವ್ಯಕ್ತಿ ಯಾರು? ಹಿಂದೊಮ್ಮೆ ನಾನೇ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೆ. ಪ್ರತಿ ವರ್ಗಾವಣೆಗೆ ತಲಾ 30 ಲಕ್ಷ ರೂ. ಪೀಕುತ್ತಿದ್ದ ಗಿರಾಕಿ ಈತ ಎಂದು ತಿಳಿಸಿದ್ದೆ. ಕುಮಾರಸ್ವಾಮಿ ಸುಳ್ಳು ಹೇಳ್ತಾ ಇದ್ದಾರೆ, ಅವರು ಹೇಳೋದು 99.9999% ಸುಳ್ಳು. ಅವರಿಗೆ ನಾನು ಉತ್ತರ ಕೊಡಲ್ಲ, ಅವರು ಹಿಟ್ ಆಂಡ್ ರನ್ ಗಿರಾಕಿ ಎಂದಿದ್ದ ಸಿಎಂ ಸಿದ್ದರಾಮಯ್ಯನವರು ಈಗ ಏನು ಹೇಳುತ್ತಾರೆ?